ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರ ರ್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್ಐಆರ್ ದಾಖಲಾಗಿದ್ದು, ವಿಜಯ್ ತಡವಾಗಿ ಆಗಮಿಸಿದ್ದು, ಜೊತೆಗೆ ರೋಡ್ ಶೋಗೆ ಅನುಮತಿ ಇರದಿದ್ದೇ ದುರಂತಕ್ಕೆ ಕಾರಣವೆಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸಭೆಗೆ 10,000 ಜನರಿಗೆ ಅನುಮತಿ ನೀಡಲಾಗಿದ್ದರೂ, ವಿಜಯ್ ಬರುವ ಸುದ್ದಿ ಹೊರಬಿದ್ದ ನಂತರ ಜನಸಂದಣಿ 25,000 ಕ್ಕೆ ಏರಿತ್ತು. ಸುರಕ್ಷತೆಗೆ 500ಕ್ಕೂ ಹೆಚ್ಚು ಪೊಲೀಸರಿದ್ದರೂ, ನಿಯಂತ್ರಣ ಕಳೆದು ದುರಂತ ನಡೆದಿದೆ.
ಈ ದುರಂತದ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದ್ದು, ಅಧಿಕೃತ ತನಿಖೆ ಪೂರ್ಣಗೊಳ್ಳುವವರೆಗೆ ವಿಜಯ್ ಅವರ ಪಕ್ಷ ಟಿವಿಕೆ ಯಾವುದೇ ಸಭೆ ನಡೆಸಬಾರದು ಎಂದು ಹೇಳಲಾಗಿದೆ. ಘಟನೆ ನಿರ್ವಹಣೆ, ಪೊಲೀಸ್ ಭದ್ರತೆ ಮತ್ತು ಜನಸಂದಣಿ ನಿಯಂತ್ರಣದ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತಿವೆ. ತಮಿಳುನಾಡು ಸರ್ಕಾರ ಈಗಾಗಲೇ ತನಿಖೆ ಪ್ರಾರಂಭಿಸಿದ್ದು, ಹಿರಿಯ ಅಧಿಕಾರಿಗಳಿಂದ ಲೋಪ ಪರಿಶೀಲನೆ ನಡೆಯುತ್ತಿದೆ.
ಕಾಲ್ತುಳಿತ ದುರಂತದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ವಿಜಯ್ ಅವರಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೂರಿಗೆ ಭೇಟಿ ನೀಡಿ, ಘಟನೆ ನಡೆದ ಸ್ಥಳ ಪರಿಶೀಲಿಸಿದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಈ ದುರಂತವು ರಾಜಕೀಯ ವಲಯದಲ್ಲೂ ದೊಡ್ಡ ಚರ್ಚೆ ಹುಟ್ಟಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ