Thursday, November 27, 2025

Latest Posts

ರಾಹುಲ್ ಎದೆಗೆ ಗುಂಡು ಹೊಡೆಯುತ್ತೇವೆ : ಕೇರಳ BJP ವಕ್ತಾರ ಪಿಂಟು ಹೇಳಿಕೆ

- Advertisement -

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರ ಎದೆಗೆ ಗುಂಡು ಹೊಡೆಯುತ್ತೇವೆಂದು ಹೇಳಿಕೆ ನೀಡಿರುವ ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್‌ಗಾಂಧಿಯವರ ಮೇಲೆ ಮಾಡಿದ ಈ ಕೊಲೆ ಬೆದರಿಕೆ ಸಾಮಾನ್ಯ ಹೇಳಿಕೆಯಲ್ಲ, ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿ ಎಂದಿದೆ.

ರಾಹುಲ್ ಗಾಂಧಿಯವರಿಗೆ ಹಲವು ಬಾರಿ ಜೀವ ಬೆದರಿಕೆ ಎದುರಾಗಿದೆ. ಇದೀಗ ಬಿಜೆಪಿ ನಾಯಕನಿಂದ ಬಂದಿರುವ ಈ ಹೇಳಿಕೆ, ಬಿಜೆಪಿಯ ಉದ್ದೇಶದ ಬಗ್ಗೆ ಗಂಭೀರ ಅನುಮಾನಗಳನ್ನು ಎಬ್ಬಿಸಿದೆ. ಇದು ಪಿತೂರಿಯೇ? ಬಿಜೆಪಿ ಕ್ರಿಮಿನಲ್ ಬೆದರಿಕೆ, ಹಿಂಸೆ ಮತ್ತು ಕೊಲೆ ಬೆದರಿಕೆಗಳನ್ನು ಬೆಂಬಲಿಸುತ್ತದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ವಿರೋಧ ಪಕ್ಷದ ನಾಯಕರ ವಿರುದ್ಧ ಹಿಂಸಾಚಾರವನ್ನು ಸಾಮಾನ್ಯಗೊಳಿಸುವ ಪ್ರಯತ್ನವೋ ಎಂಬ ಆತಂಕ ವ್ಯಕ್ತವಾಗಿದೆ.

ಪಿಂಟು ಮಹಾದೇವ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು, ಬಿಜೆಪಿ ಅಧಿಕೃತವಾಗಿ ಖಂಡನೆ ವ್ಯಕ್ತಪಡಿಸಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇಲ್ಲದಿದ್ದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಈ ಹೇಯ ಕೃತ್ಯದಲ್ಲಿ ಪಾಲುದಾರರೆಂದು ನಂಬಬೇಕಾಗುತ್ತದೆ ಎಂದು ಎಚ್ಚರಿಸಿದೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಕೂಡಾ ಗೃಹಮಂತ್ರಿಗೆ ಪತ್ರ ಬರೆದು, ತಕ್ಷಣ ಕ್ರಮಕೈಗೊಳ್ಳದಿದ್ದರೆ ಇದು ಸಂವಿಧಾನ ಹಾಗೂ ಪ್ರಮಾಣವಚನದ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss