Thursday, October 2, 2025

Latest Posts

ನಮಗೆ ‘ವಿಶೇಷ ಪ್ಯಾಕೇಜ್’ ಕೊಡಿ ಎಂದು ಕುಮಾರಸ್ವಾಮಿಗೆ ಮನವಿ ಪತ್ರ !

- Advertisement -

ಅತೀವೃಷ್ಟಿ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಹಾಗಾಗಿ ಈ ಭಾಗಕ್ಕೆ ತಕ್ಷಣ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಯಾದಗಿರಿ ಜಿಲ್ಲಾ ಶಾಸಕ ಶರಣಗೌಡ ಕಂದಕೂರ್ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾದಗಿರಿ ಜಿಲ್ಲಾ ಶಾಸಕ ಶರಣಗೌಡ ಕಂದಕೂರ್ ಮನವಿ ಪತ್ರವನ್ನ ಸಲ್ಲಿಸಿದ್ದಾರೆ.

ಒಮ್ಮೆ ಬರ ಬಂದ್ರೆ , ಮತ್ತೊಮ್ಮೆ ನೆರೆ ಬರತ್ತೆ. ಹೀಗೆ, ಪ್ರಕೃತಿವಿಕೋಪ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಮತ್ತೇ ನಲುಗುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ ಸುರಿದ ಅತೀವೃಷ್ಟಿ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಿಂದಾಗಿ ಭೀಮಾನದಿ ಪಾತ್ರಕ್ಕೆ ಹರಿದುಬಂದ ನೀರಿನ ಪ್ರವಾಹದಿಂದಾಗಿ ಭಾರಿ ಅನಾಹುತಗಳು ಸಂಭವಿಸಿವೆ. ಸೆ.23 ರಿಂದ ಸೆ. 28ರವರೆಗೆ ಭೀಮಾನದಿಗೆ 24 ಲಕ್ಷ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಹೊರಬಿಡಲಾಗಿದೆ. ಇದು ಪ್ರವಾಹಕ್ಕೆ ಕಾರಣವಾಗಿದೆ.

ಸೇತುವೆ, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ, ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು -ಕಡಿತಗೊಂಡಿವೆ. ಮನೆಗಳು ಕುಸಿದು ಬಿದ್ದಿವೆ, ವಿದ್ಯುತ್ ಅವ್ಯವಸ್ಥೆ ಎಲ್ಲೆ ಮೀರಿದೆ. ಜನ ಅತಂತ್ರದಲ್ಲಿದ್ದಾರೆ. ಜನ-ಜಾನುವಾರುಗಳ ಜೀವಹಾನಿ ಕಂಡಿವೆ. ಅದರಲ್ಲೂ, ಲಕ್ಷಾಂತರ ಹೆಕ್ಟೇ‌ರ್ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿ, ನೂರಾರು ಕೋಟಿ ರುಪಾಯಿಗಳ ಬೆಳೆಹಾನಿ ಸಂಭವಿಸಿದೆ. ಮುಂದಿನ ಸಮೀಕ್ಷೆಯಲ್ಲಿ ಹಾನಿಯ ಅಂಕಿಅಂಶಗಳು ಮತ್ತಷ್ಟು ಹೆಚ್ಚಳ ಕಾಣಬಹುದೆಂದು ಕೃಷಿ ಇಲಾಖೆ ಮೂಲಗಳು ಸೂಚಿಸುತ್ತಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ತಾವು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದ್ದಾಗ, ಅಂದಿನ ಕೇಂದ್ರ ಸರ್ಕಾರದ ಮನವೊಲೈಸಿ, ರಾಜ್ಯಕ್ಕೆ ಕೋಟ್ಯಂತರ ರುಪಾಯಿಗಳ ನೆರವು ಸಿಗುವಂತೆ ಮಾಡಿದ್ದೀರಿ. ರೈತರ ಹಾಗೂ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ತಾವು ಆಳವಾಗಿ ಸ್ಪಂದಿಸಿದ್ದೀರಿ.

ರೈತರ ಬೆಳೆ ಪರಿಹಾರ, ಸಾಲಮನ್ನಾ ಮುಂತಾದವುಗಳ ಮೂಲಕ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿದ್ದೀರಿ. ಸದ್ಯದ ರಾಜ್ಯ ಸರ್ಕಾರ ಅಲ್ಪಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ, ಜನರಿಗೆ ನೆರವು ನೀಡುವಲ್ಲಿ ವಿಫಲವಾಗಿದೆ. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಜನರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss