ಬಿಹಾರ ವಿಧಾನಸಭಾ ಚುನಾವಣೆಗೆ, ಕೆಲವೇ ತಿಂಗಳು ಬಾಕಿ ಉಳಿದಿವೆ. ಖಾಸಗಿ ಮಾಧ್ಯಮ ವಾಹಿನಿಗಳು ಮತ್ತು ಕೆಲ ಸಂಸ್ಥೆಗಳು, ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಈ ಬಾರಿ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ವರ್ಸಸ್ ತೇಜಸ್ವಿ ಯಾದವ್ ಎಂದೇ ಬಿಂಬಿತವಾಗ್ತಿದೆ.
ಟೈಮ್ಸ್ ನೌ ಮತ್ತು ಜೆವಿಸಿ ಹೊಸ ಸಮೀಕ್ಷೆ ಪ್ರಕಟವಾಗಿದೆ. ಈ ಸರ್ವೇ ಪ್ರಕಾರ, ಎನ್‌ಡಿಎ ಕೂಟ 130ರಿಂದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ಬಿಜೆಪಿ ತನ್ನ ಸ್ವಂತ ಬಲದಿಂದ ಸುಮಾರು 66ರಿಂದ 77 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ನಿತೀಶ್ ಕುಮಾರ್ ಅವರ ಜೆಡಿಯು 52ರಿಂದ 58 ಮತ್ತು ಎನ್‌ಡಿಎ ಕೂಟದ ಇತರೆ ಪಕ್ಷಗಳು 13ರಿಂದ 15 ಕ್ಷೇತ್ರಗಳಲ್ಲಿ ಗೆಲ್ಲಲಿವೆಯಂತೆ.
ತೇಜಸ್ವಿ ಯಾದವ್ ಅವರ ಮೈತ್ರಿಕೂಟ, 81ರಿಂದ 103 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಲಾಲೂಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷ ಸ್ವಂತ ಬಲದಲ್ಲಿ 87ರಿಂದ 71 ಸ್ಥಾನ, ಕಾಂಗ್ರೆಸ್ ಪಕ್ಷ 11ರಿಂದ 14 ಸ್ಥಾನ ಮತ್ತು ಇಂಡಿಯಾ ಬ್ಲಾಕ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳು 13ರಿಂದ 18 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಹೇಳಿವೆ.
ಇನ್ನು, ಬಿಹಾರ ಚುನಾವಣೆಯಲ್ಲಿ ಜನ್ ಸುರಜ್ ಪಕ್ಷದ ಮೂಲಕ, ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅಖಾಡಕ್ಕಿಳಿದಿದ್ದಾರೆ. ಸಮೀಕ್ಷೆ ಪ್ರಕಾರ ಜನ್ ಸುರಜ್ ಪಕ್ಷ ಕೇವಲ 4ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ AIMIM ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. AIMIM ಮತ್ತು BSP ಜೊತೆಯಾಗಿ 5ರಿಂದ 6 ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಸಮೀಕ್ಷೆ ಹೇಳಿದೆ.

