ನೆರೆಯ ಬಾಂಗ್ಲಾದೇಶ, ನೇಪಾಳದ ಬಳಿಕ ಈಗ ಪಾಕಿಸ್ತಾನದಲ್ಲಿಯೂ ಸರ್ಕಾರ ವಿರೋಧಿ ಚಳುವಳಿ ತೀವ್ರಗೊಂಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಂದರೆ ಪಿಒಕೆಯಲ್ಲಿ ಸಾವಿರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ಆರಂಭಿಸಿದ್ದು, ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಏಳು ದಶಕಗಳಿಂದಲೂ ಜನತೆಯ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಆಡಳಿತದ ವಿರುದ್ಧ ಹೋರಾಟಕ್ಕೆ ಪಿಒಕೆಯಾದ್ಯಂತ ವ್ಯಾಪಾರ ಬಂದ್, ಸಾರಿಗೆ ಸ್ಥಗಿತ, ಅಂಗಡಿ-ಮುಂಗಟ್ಟು ಮುಚ್ಚುವ ಮೂಲಕ ಜನತೆ ಧಿಕ್ಕಾರ ವ್ಯಕ್ತಪಡಿಸಿದ್ದಾರೆ.
ಈ ಹೋರಾಟವನ್ನು ತಡೆಯಲು ಪಾಕ್ ಸರ್ಕಾರ ಭಾರೀ ಸಂಖ್ಯೆಯಲ್ಲಿ ಸೇನೆ ಹಾಗೂ ಯೋಧರನ್ನು ನಿಯೋಜಿಸಿದ್ದು, ಸೋಮವಾರ ನಡೆದ ಗಲಭೆಯಲ್ಲಿ ಯೋಧರ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಜೊತೆಗೆ ಜನರ ಸಂಪರ್ಕವನ್ನು ಕಡಿತಗೊಳಿಸಲು ಉದ್ದೇಶಪೂರ್ವಕವಾಗಿ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಬಲೂಚಿಸ್ತಾನದ ಬಳಿಕ ಪಿಒಕೆಯಲ್ಲಿ ಆರಂಭವಾದ ಈ ಹೋರಾಟ, ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅವಾಮಿ ಆ್ಯಕ್ಷನ್ ಕಮಿಟಿಯ ಕರೆ ಮೇಲೆ ಶಟರ್ ಡೌನ್ ಮತ್ತು ವೀಲ್ ಜಾಮ್ ಮುಷ್ಕರಕ್ಕೆ ಪಿಒಕೆಯ ಹಲವು ನಗರಗಳು ಸಾಕ್ಷಿಯಾದವು. ರಾಜಧಾನಿ ಮೂಜಫ್ಫರಾಬಾದ್, ಮೀರ್‌ಪುರ, ಕೋಟ್ಲಿ, ನೀಲಂ ಕಣಿವೆ ಸೇರಿ ಅನೇಕ ಭಾಗಗಳಲ್ಲಿ ಸಾವಿರಾರು ಜನರು ಹೋರಾಟದಲ್ಲಿ ಭಾಗವಹಿಸಿದ್ದು, ಸಂಪೂರ್ಣವಾಗಿ ವಹಿವಾಟು ಮತ್ತು ಸಾರಿಗೆ ಸ್ಥಗಿತಗೊಂಡಿದೆ. ಪ್ರತಿಭಟನಾಕಾರರು ಪಾಕ್ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಪಿಒಕೆಗೆ ನೀಡಲಾಗುತ್ತಿರುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು, ಜೊತೆಗೆ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ