ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಾಕ್ ಆಗಿದ್ದಾರೆ. ಸೆರೆವಾಸದಲ್ಲಿರುವ ದರ್ಶನ್‌ಗೆ ಮತ್ತಷ್ಟು ದಿನಗಳು ಸಂಕಷ್ಟ ತಪ್ಪಿದಲ್ಲ. ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ಅವರು ಹೆಚ್ಚುವರಿ ದಿಂಬು, ಹಾಸಿಗೆಯ ಸೌಲಭ್ಯ ಕೋರಿ ಮನವಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದ್ದು, ವಾದ, ಪ್ರತಿವಾದ ತಾರಕಕ್ಕೇರಿದೆ.
ಕೋರ್ಟ್‌ನಲ್ಲಿ ಕಳೆದ ಬಾರಿಯ ವಿಚಾರಣೆ ವೇಳೆ ಜೈಲು ಅಧಿಕಾರಿ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿತ್ತು. ಹೀಗಾಗಿ ಇಂದಿನ ವಿಚಾರಣೆಯಲ್ಲಿ, ಜೈಲು ಅಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ರು. ಕೊಲೆ ಆರೋಪಿ ಪಲ್ಲಂಗ ಕೇಳಿದರೆ ಕೊಡಲು ಸಾಧ್ಯವಿಲ್ಲ. ಜೈಲಿನ ಮ್ಯಾನ್ಯುವೆಲ್ ಪ್ರಕಾರವೇ ಎಲ್ಲವನ್ನೂ ಕೊಡಲಾಗ್ತಿದೆ. ವಾಕಿಂಗ್‌ಗೆ ಬೆಳಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಅವಕಾಶ ನೀಡಲಾಗಿದೆ. ಇದೇ ಸೆಲ್‌ನಲ್ಲಿ ಇರಬೇಕೆಂದು ಕೇಳುವ ಅಧಿಕಾರ ಆರೋಪಿಗೆ ಇಲ್ಲ. ನಾವೇಕೆ ಅವರನ್ನು ಸೆಲೆಬ್ರಿಟಿ ಅನ್ನಬೇಕೆಂದು, ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಶ್ನಿಸಿದರು.
ದರ್ಶನ್ ಪರ ವಕೀಲ ಸುನೀಲ್ ಕೂಡ ತಮ್ಮದೇ ವಾದ ಮಂಡಿಸಿದ್ದಾರೆ. ಜೈಲು ಆದೇಶದ ಬಗ್ಗೆ ಜೈಲು ಅಧಿಕಾರಿಗಳಿಗೆ ಮರ್ಯಾದೆ ಇಲ್ಲ. ಉಗ್ರರು ಇರಿಸುವ ಸೆಲ್‌ನಲ್ಲಿ ದರ್ಶನ್‌ರನ್ನು ಇರಿಸಿದ್ದಾರೆ. 45 ದಿನದಿಂದ ಕ್ವಾರಂಟೈನ್ ಸೆಲ್‌ನಲ್ಲಿ ಇದ್ದಾರೆ. ಅವರಿಗೆ ಹಿಂಸೆ ನೀಡಲಾಗ್ತಿದೆ. ವಾಕಿಂಗ್‌ಗೆ ಅವಕಾಶವನ್ನೇ ಕೊಡ್ತಿಲ್ಲ. ಬರೀ ಸೆಲ್ ಒಳಗೆ ಮಾಡಿ ಅಂತಾರೆ. ಮೂಲಭೂತ ಸೌಲಭ್ಯ ಕೊಡಿ ಅಂತಿದ್ದೀವಿ ಅಷ್ಟೇ. ಮ್ಯಾನ್ಯುವಲ್ ಪ್ರಕಾರ ಏನೇನು ಕೊಡಬೇಕೆಂದು ನೀವೇ ಹೇಳಿ. ನಾವು ಚಿನ್ನದ ಮಂಚ ಕೇಳಿಲ್ಲ. ನಾವು ಕೇಳುತ್ತಿರುವುದು ಬೆಡ್‌ಶೀಟ್, ತಟ್ಟೆ, ಲೋಟ, ಚಂಬು. ಎಲ್ಲದ್ದಕ್ಕೂ ಕೋರ್ಟ್ ಎದುರು ಬರಬೇಕಾಗಿದೆ. ದರ್ಶನ್ ಭೇಟಿಗೆ ಹೋಗುವವರಿಗಾಗಿಯೇ ಪ್ರತ್ಯೇಕ ರಿಜಿಸ್ಟರ್ ಏಕೆ ಇಟ್ಟಿದ್ದಾರೆ ಎಂದು ವಕೀಲ ಸುನೀಲ್ ಪ್ರಶ್ನಿಸಿದ್ದಾರೆ.
ದರ್ಶನ್ ಪರ ವಕೀಲರ ವಾದ ಆಲಿಸಿದ ಜಡ್ಜ್, ಸ್ವಲ್ಪ ಗರಂ ಆಗಿಯೇ ಉತ್ತರಿಸಿದರು. ಸುಮ್ಮನೆ ಆರೋಪ ಮಾಡಬೇಡಿ. ಆದೇಶ ಏನು ಪಾಲನೆ ಆಗಿಲ್ಲವೆಂದು ಹೇಳಿ. ತಟ್ಟೆ, ಲೋಟ, ಚಂಬು, ಚಾಪೆ, ದಿಂಬು, ಮಗ್ ಕೊಟ್ಟಿದ್ದಾರೆ. ಆರೋಪಿಯ ಸುರಕ್ಷತಾ ದೃಷ್ಟಿ ಮುಖ್ಯ ಅಲ್ವಾ. ಅದು ಜೈಲು ಅಧಿಕಾರಿಗಳ ಕರ್ತವ್ಯ ಅಲ್ವಾ. ಬ್ಯಾರಕ್ ಒಳಗೆ ವಾಕಿಂಗ್ ಮಾಡಿಸ್ತಿದ್ದಾರೆ. ಕಾನೂನು ಅಡಿಯಲ್ಲಿ ಏನೇನು ಕೊಡಬೇಕೋ ಎಲ್ಲವನ್ನೂ ಕೊಡ್ತಾರೆ. ಕೋರ್ಟ್ ಘನತೆಗೆ ತಕ್ಕಂತೆ ವಾದಿಸಿ ಅಂತಾ ಗರಂ ಆಗಿದ್ರು.
ಸಂಪೂರ್ಣವಾದ ವಾದ, ಪ್ರತಿವಾದ ಆಲಿಸಿದ ಬಳಿಕ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. ದರ್ಶನ್ ಸೌಲಭ್ಯದ ಭವಿಷ್ಯ ಇದೇ ಅಕ್ಟೋಬರ್ 9ಕ್ಕೆ ನಿಗದಿಯಾಗಿದೆ.