ಧರ್ಮದ ವೇಷದಲ್ಲಿ ಪಾಪ – ಶಾರದಾ ಪೀಠ ಸ್ವಾಮಿಜಿಯ ‘ಡಬಲ್ ಲೈಫ್’ ಬಹಿರಂಗ!

ಶಾರದಾ ಪೀಠದಲ್ಲಿ ಚೈತನ್ಯಾನಂದ ಸರಸ್ವತಿ ಹದಿನೇಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅವರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಚಾರಣೆಯ ಭಾಗವಾಗಿ ಅವರನ್ನು ನೈಋತ್ಯ ದೆಹಲಿಯಲ್ಲಿರುವ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ.

ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿ ಪತ್ತೆಯಾಗಿದೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳೂ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದಿವೆ. ಇದೇ ಸಂಸ್ಥೆಯ ಮಾಜಿ ನಿರ್ದೇಶಕರಾಗಿದ್ದ ಸ್ವಾಮಿಜಿಗೆ ವಿಚಾರಣೆಯ ವೇಳೆ ಆ ಕೊಠಡಿಗೂ ಕರೆದೊಯ್ಯಲಾಯಿತು.

ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದೆ. ವಿದ್ಯಾರ್ಥಿನಿಯರನ್ನು ಸಂಪರ್ಕಿಸಲು ಈ ಫೋನ್ ಬಳಸಲಾಗುತ್ತಿತ್ತೆಂದು ಶಂಕಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಫೋನ್‌ನ ಮೂಲಕ ಕ್ಯಾಂಪಸ್ ಹಾಗೂ ಹಾಸ್ಟೆಲ್‌ನ ಸಿಸಿಟಿವಿ ಫೀಡ್‌ಗಳನ್ನು ನೇರವಾಗಿ ವೀಕ್ಷಿಸುತ್ತಿದ್ದ ವಿಚಾರವೂ ಬಹಿರಂಗವಾಗಿದೆ.

ಇದೇ ವೇಳೆ, ಸೆಪ್ಟೆಂಬರ್ 14 ರಂದು ಒಬ್ಬ ಸಂತ್ರಸ್ತೆಯ ತಂದೆಗೆ ಬೆದರಿಕೆ ಕರೆ ಬಂದಿದೆ. ಆ ಕರೆ 38 ವರ್ಷದ ಹರಿ ಸಿಂಗ್ ಕೊಪ್ಕೋಟಿ ಎಂಬ ವ್ಯಕ್ತಿ ಅನ್ನೋದು ಪತ್ತೆಯಾಗಿದೆ. ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಗಿದೆ.

ಚೈತನ್ಯಾನಂದರ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್‌ಗಳು ಪತ್ತೆಯಾಗಿವೆ. ಒಂದರಲ್ಲಿ ಅವರು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಅವರು ಪ್ರಧಾನಿ ಕಚೇರಿಯೊಂದಿಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿರುವುದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.

ಸ್ವಾಮಿಯ ಬಳಿ ಎರಡು ಪಾಸ್‌ಪೋರ್ಟ್‌ಗಳು ಕೂಡ ಪತ್ತೆಯಾಗಿವೆ. ಎರಡನ್ನೂ ನಕಲಿ ದಾಖಲೆಗಳ ಆಧಾರದ ಮೇಲೆ ಪಡೆದುಕೊಂಡಿದ್ದಾರೆ. ಒಂದರಲ್ಲಿ ತಂದೆಯ ಹೆಸರನ್ನು ‘ಸ್ವಾಮಿ ಘಾನಾನಂದ ಪುರಿ’ ಎಂದು ಬರೆಸಿದ್ದಾರೆ. ಮತ್ತೊಂದರಲ್ಲಿ ‘ಸ್ವಾಮಿ ದಯಾನಂದ ಸರಸ್ವತಿ’ ಎಂದು ನಮೂದಿಸಲಾಗಿದೆ. ತಾಯಿಯ ಹೆಸರನ್ನೂ ಶಾರದಾ ಅಂಬಾಲ್ ಅಂತ ವಿಭಿನ್ನವಾಗಿ ದಾಖಲಿಸಲಾಗಿದೆ.

ಸದ್ಯ ಅವರನ್ನ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಗೆ ಕರೆದೊಯ್ಯಲಾಗಿದೆ. ಅವರ ಕಚೇರಿ ಮತ್ತು ವಾಸಸ್ಥಳಗಳು ಸೇರಿದಂತೆ ಸ್ಥಳಗಳನ್ನು ಗುರುತಿಸಲಾಗಿದೆ. ಪುರಾವೆಗಾಗಿ ಶೋಧ ನಡೆಸಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author