Tuesday, October 14, 2025

Latest Posts

ಜಾತಿಗಣತಿಗೆ BJP ಬೆಂಬಲ? ಆರ್‌. ಅಶೋಕ್ ಸ್ಪಷ್ಟನೆ

- Advertisement -

ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆಗೆ ಬಿಜೆಪಿ ವಿರೋಧವಿಲ್ಲ. ಆದರೆ ಜಾತಿ-ಧರ್ಮ ಒಡೆಯುವ ಅಜೆಂಡಾಗೆ ನಮ್ಮ ವಿರೋಧವಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ. ಅವರು ಸದಾ ಜಾತಿ ಒಡೆಯುವ ರಾಜಕೀಯ ಮಾಡುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಯಾವುದೇ ಜಾತಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡುವುದಕ್ಕೆ ನಮಗೆ ವಿರೋಧವಿಲ್ಲ. ಆದರೆ ಸರ್ಕಾರ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಅನಗತ್ಯ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತಿದೆ. ಹೀಗಾಗಿ ಜನರು ಮಾಹಿತಿ ನೀಡದೇ ಇರುವ ಸಾಧ್ಯತೆ ಇದೆ. ಹೈಕೋರ್ಟ್ ಕೂಡ ಇದು ಜನರ ವೈಯಕ್ತಿಕ ಆಯ್ಕೆ ಎಂದು ಹೇಳಿದೆ ಎಂದು ಅಶೋಕ್‌ ಟೀಕಿಸಿದರು.

ಕೇಂದ್ರ ಸರ್ಕಾರ ಸಂವಿಧಾನದ ಪ್ರಕಾರ ಜನಗಣತಿ ನಡೆಸುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಇಂತಹ ಸಮೀಕ್ಷೆ ನಡೆಸುವ ಅಧಿಕಾರವಿಲ್ಲ. ಸಮೀಕ್ಷೆ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲ. ಸಿಬ್ಬಂದಿಯನ್ನು ಅಮಾನತು ಮಾಡುವ ಬೆದರಿಕೆ ಹಾಕಿ ಸಮೀಕ್ಷೆ ಮುಂದುವರಿಸಲಾಗುತ್ತಿದೆ. ಎರಡು ಕೋಟಿ ಮನೆಗಳ ಮಾಹಿತಿಯನ್ನು ಕೇವಲ ಎರಡು ವಾರಗಳಲ್ಲಿ ಸಂಗ್ರಹಿಸುವುದು ಅಸಾಧ್ಯ. ಜೊತೆಗೆ ಈ ಸಮೀಕ್ಷೆಯಲ್ಲೇ ಕೇವಲ ಜಾತಿ-ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳನ್ನು ಕಡೆಗಣಿಸಲಾಗಿದೆ. ಅಂತಿಮವಾಗಿ ಈ ವರದಿ ಕಸದ ಬುಟ್ಟಿಗೆ ಸೇರುವುದು ಖಚಿತ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ಸಮೀಕ್ಷೆ ಬಹಿಷ್ಕಾರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅಶೋಕ್‌, ಅವು ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಸಹ ಪಕ್ಷದ ನಿರ್ಧಾರವೆಂದು ಪರಿಗಣಿಸಲು ಸಾಧ್ಯವಿಲ್ಲ. ಬಿಜೆಪಿ ಸಮೀಕ್ಷೆ ಬಹಿಷ್ಕಾರ ಕುರಿತು ಯಾವುದೇ ಅಧಿಕೃತ ತೀರ್ಮಾನ ಕೈಗೊಂಡಿಲ್ಲ ಎಂದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss