ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್, ಪವಿತ್ರಾ ಹಾಗೂ ಇತರರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಹಿಂದೆ ಜೈಲಿನಲ್ಲಿ ದರ್ಶನ್ ಕೆಲ ಅಕ್ರಮ ಸೌಲಭ್ಯಗಳನ್ನು ಪಡೆದಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ, ಈ ಬಾರಿ ಜೈಲಧಿಕಾರಿಗಳು ಹೆಚ್ಚಿನ ಶಿಸ್ತಿನೊಂದಿಗೆ ಅವರನ್ನು ಇರಿಸಿಕೊಂಡಿದ್ದಾರೆ. ಆದರೆ ಇದರಿಂದ ಅಸಮಾಧಾನಗೊಂಡ ದರ್ಶನ್, ತಮಗೆ ಸಾಮಾನ್ಯ ಸೌಕರ್ಯಗಳು ದೊರೆಯುತ್ತಿಲ್ಲವೆಂದು ದೂರಿದ್ದು, ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ದರ್ಶನ್ ತಮ್ಮನ್ನು ಬಿಸಿಲು ಚೆನ್ನಾಗಿ ಬರುವ ಬ್ಯಾರಕ್‌ಗೆ ವರ್ಗಾಯಿಸುವಂತೆ ಹಾಗೂ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ಬೇಕೆಂದು ಮನವಿ ಮಾಡಿದ್ದರು. ಆದರೆ ಜೈಲು ಅಧೀಕ್ಷಕರು ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ವಿಚಾರ ನ್ಯಾಯಾಲಯದಲ್ಲಿಯೂ ಚರ್ಚೆಯಾಗಿ, ತೀವ್ರ ವಾದ-ಪ್ರತಿವಾದ ನಡೆದಿದ್ದು, ಅಂತಿಮ ಆದೇಶವನ್ನು ಅಕ್ಟೋಬರ್ 9ಕ್ಕೆ ಕಾಯ್ದಿರಿಸಲಾಗಿದೆ. ಇದ್ರಲ್ಲಿಯೂ ತೃಪ್ತರಾಗದ ದರ್ಶನ್, ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಮಾನವ ಹಕ್ಕು ಆಯೋಗವು ಯಾವುದೇ ವ್ಯಕ್ತಿಯ ಸಾಂವಿಧಾನಿಕ ಹಕ್ಕುಗಳನ್ನು ಕಾಯುವ ಸಂಸ್ಥೆಯಾಗಿದ್ದು, ನ್ಯಾಯಾಂಗ ಖೈದಿಗೂ ತಕ್ಕ ಹಕ್ಕುಗಳಿವೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ವಕೀಲರೊಂದಿಗೆ ಚರ್ಚೆ ನಡೆಸಿ, ಮಾನವ ಹಕ್ಕು ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆ, ಪ್ರಕರಣದ ಗಂಭೀರತೆಯ ನಡುವೆ ಮತ್ತೊಂದು ಹೊಸ ತಿರುವು ಪಡೆದಂತಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ