ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ, ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ನಾಳೆ ವಿಜಯದಶಮಿಯಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಇಂದು ಬೆಂಗಳೂರಿನ ಒರಿಯನ್ ಮಾಲ್, ವಿರೇಶ್ ಥಿಯೇಟರರ್ ಸೇರಿದಂತೆ ಹಲವು ಮಲ್ಟಿಫ್ಲೇಕ್ಸ್ – ಥಿಯೇಟರ್ ಗಳಲ್ಲಿ ಪೇಯ್ಡ್ ಪ್ರಿಮಿಯರ್ ಶೋ ಕೂಡ ಇರಲಿದೆ ಮತ್ತು ಈಗಾಗಲೇ ಆ ಟಿಕೆಟ್ ಗಳು ಕೂಡ ಸೋಲ್ಡೌಟ್ ಆಗಿವೆ. ಬಿಡುಗಡೆಗೂ ಮುನ್ನವೇ ಸಿನಿಮಾ ಕ್ರೇಜ್ ತಲುಪಿದ ಮಟ್ಟ ಅಚ್ಚರಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೊದಲ ದಿನದ ಟಿಕೆಟ್ ದರ 1200 ರೂ.ವರೆಗೂ ಏರಿದ್ದರೂ, ಎಲ್ಲಾ ಶೋಗಳು ಸೋಲ್ಡೌಟ್! ದೇಶದಾದ್ಯಂತ 6500 ರಿಂದ 7000 ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾ, ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುತ್ತಿದೆ. ಈ ಚಿತ್ರವು 7 ಕ್ಕೂ ಹೆಚ್ಚು ಭಾಷೆಗಳಲ್ಲಿ, 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಕೇವಲ 34 ನಿಮಿಷಗಳಲ್ಲಿ 10 ಸಾವಿರ ಟಿಕೆಟ್‌ಗಳು ಬುಕ್ ಆಗಿ, ಈ ವೇಗದಲ್ಲಿ ಮಾರಾಟವಾದ ಮೊದಲ ಕನ್ನಡ ಸಿನಿಮಾ ಎಂಬ ಗೌರವ ಪಡೆದುಕೊಂಡಿದೆ. ಅಮೆರಿಕಾದಲ್ಲೇ ಅಡ್ವಾನ್ಸ್ ಬುಕಿಂಗ್‌ನಿಂದ 3 ಕೋಟಿ ರೂ. ಗಳಿಸಿದ್ದು, ದೇಶಾದ್ಯಂತ ಟಿಕೆಟ್ ಮಾರಾಟದಿಂದಲೇ 11 ಕೋಟಿ ರೂ. ವಸೂಲಿ ಮಾಡಿದೆ. ರಾಜ್ಯದ ಹಲವೆಡೆ ಬೆಳಗ್ಗೆ 6.30 ರಿಂದಲೇ ಶೋಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಮೊದಲ ದಿನವೇ 2000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ.
ಆಂಧ್ರದಲ್ಲಿ ಬಾಯ್ಕಾಟ್ ಚಳುವಳಿ ಎದ್ದಿದ್ದರೂ, ಪವನ್ ಕಲ್ಯಾಣ್ ಚಿತ್ರ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಕನ್ನಡ ಸಿನಿಮಾಗಳನ್ನು ತಡೆಯುವುದು ಸರಿಯಲ್ಲ, ನಾವು ಸಹೋದರತ್ವದಿಂದ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪಿವಿಆರ್-ಐನಾಕ್ಸ್‌ಗಳಲ್ಲಿ ಮೊದಲ ನಾಲ್ಕು ದಿನಗಳಿಗೆ 3 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡಿರುವ ಈ ಚಿತ್ರ, ಪ್ರಾರಂಭಿಕ ದಿನಗಳಲ್ಲೇ 80 ಕೋಟಿಗೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ