ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 6 ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ. ಈ ಬಾರಿ ನೈರುತ್ಯ ಮುಂಗಾರು ಇರುವುದರಿಂದ ಅಕ್ಟೋಬರ್ 15ರವರೆಗೆ ವಿಸ್ತಾರಗೊಳ್ಳಲಿದೆ ಎಂದು IMD ತಿಳಿಸಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ 30ರೊಳಗೆ ಮುಂಗಾರು ಕಾಲಾವಧಿ ಅಂತ್ಯವಾಗಬೇಕು. ಆದ್ರೆ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ. ಇದರಿಂದಾಗಿ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡು ಭಾಗಗಳಲ್ಲಿ ಮುಂದಿನ ಕೆಲ ದಿನಗಳು ಭಾರೀ ಮಳೆಯೊಂದಿಗೆ ಜತೆಗೆ ಗುಡುಗು ಸಹಿತ ಮಳೆ ಸಂಭವಿಸಲಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆ ಹಾಗೂ ಚದುರಿದ ಮಳೆಯ ಸ್ಥಿತಿ ಮುಂದುವರಿಯಲಿದೆ. ಆದರೆ ಅಕ್ಟೋಬರ್ 2 ರಿಂದ ಅಕ್ಟೋಬರ್ 4ರವರೆಗೆ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ಎರಡನೇ ವಾರದ ಬಳಿಕ ರಾಜ್ಯದಲ್ಲಿ ಹಿಂಗಾರು ಮಳೆ ಪ್ರಾರಂಭವಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಆದರೆ ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವುದು ನಿರೀಕ್ಷಿಸಲಾಗಿದೆ.
ಈ ಬಾರಿ ಇಷ್ಟು ಮಳೆಯಾಗಲು ಕಾರಣವೇನು ಅಂದ್ರೆ ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಎರಡು ವಿಭಿನ್ನ ವಾಯುಭಾರ ಕುಸಿತಗಳು ಸೃಷ್ಟಿಯಾಗುತ್ತಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ರಾಜ್ಯದಲ್ಲಿ ನೈರುತ್ಯ ಮುಂಗಾರು ಅಕ್ಟೋಬರ್ 15 ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ವರ್ಷದ ಹಿಂಗಾರು ಮಳೆ ಸಾಮಾನ್ಯವಾಗಿರುವ ನಿರೀಕ್ಷೆಯಿದ್ದು, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ ಒಂದು ವಾರ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇನ್ನು ಕೆಲವು ದಿನಗಳು ಮಳೆಯ ಅಬ್ಬರ ಮುಂದುವರಿಯುವ ಹಿನ್ನೆಲೆ ಸಾರ್ವಜನಿಕರು ಮತ್ತು ಪ್ರವಾಸಿಗರು ಮುಂಜಾಗ್ರತೆ ವಹಿಸಲು ಹವಾಮಾನ ಇಲಾಖೆ ಮನವಿ ಮಾಡಿದೆ.
ವರದಿ : ಲಾವಣ್ಯ ಅನಿಗೋಳ