ರಾಜ್ಯ ರಾಜಕೀಯದಲ್ಲಿ ಕೆಲವು ದಿನಗಳಿಂದ ನವೆಂಬರ್ ಕ್ರಾಂತಿ ಕುರಿತ ಊಹಾಪೋಹಗಳು ಗರಿಗೆದರಿದ್ದವು. ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು ಸಹ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಹೇಳಿಕೆಗಳನ್ನು ನೀಡಿದ್ದರು. ಇದನ್ನೇ ಆಧಾರ ಮಾಡಿಕೊಂಡು ಬಿಜೆಪಿ ನಾಯಕರು ಸಹ ಸಿಎಂ ಬದಲಾವಣೆ ಆಗಲಿದೆ ಎಂದು ಟೀಕಿಸುತ್ತಿದ್ದರು.
ಆದರೆ, ಈ ಎಲ್ಲಾ ಚರ್ಚೆಗಳಿಗೆ ತೆರೆ ಎಳೆದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಇರುತ್ತೇನೆ. ಮುಂದಿನ ವರ್ಷಗಳಲ್ಲಿಯೂ ದಸರಾ ಉತ್ಸವದಲ್ಲಿ ನಾನೇ ಪುಷ್ಪಾರ್ಚನೆ ಮಾಡುವೆ ಎಂಬ ಭರವಸೆ ಇದೆ. ಬಿಜೆಪಿ ನಾಯಕರು ಎರಡನೇ ಬಾರಿಗೆ ನಾನು ಸಿಎಂ ಆಗುವುದಿಲ್ಲ, ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ನಾನೇ ಎರಡನೇ ಬಾರಿ ಸಿಎಂ ಆಗಿ ಬಜೆಟ್ ಮಂಡಿಸಿದ್ದೇನೆ ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಪಕ್ಷಕ್ಕಾಗಿ ಡಿ.ಕೆ. ಶಿವಕುಮಾರ್ ದುಡಿದಿದ್ದಾರೆ, ಅವರು ನವೆಂಬರ್‌ನಲ್ಲಿ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆ ನೀಡಿದ್ದರು. ಇದೇ ರೀತಿಯಾಗಿ, ಬಿಜೆಪಿ ನಾಯಕರು ಸಹ ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಖಚಿತ ಎಂದು ಹೇಳುತ್ತಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸುತ್ತಾ, ಬಿಜೆಪಿಯವರು ನಾನು ಸಿಎಂ ಆಗುವುದಿಲ್ಲ ಎಂದರು, ಬಜೆಟ್ ಮಂಡಿಸಲಾರೆ ಎಂದರು, ಕಾರಿನ ಮೇಲೆ ಕಾಗೆ ಕುಳಿತರೆ ಅಧಿಕಾರ ಕಳೆದುಕೊಳ್ಳುತ್ತಾರಂತೆಂದರು, ಚಾಮರಾಜನಗರಕ್ಕೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಎಂದರು.
ಆದರೆ, ಯಾವುದೂ ಆಗಿಲ್ಲ. ಈಗ ನವೆಂಬರ್ ಕ್ರಾಂತಿ ಎನ್ನುತ್ತಿದ್ದಾರೆ. ಅವರು ಏನೇನೋ ಮಾತನಾಡ್ತಾರೆ. ಸರ್ಕಾರಕ್ಕೆ ನವೆಂಬರ್‌ನಲ್ಲಿ ಎರಡೂವರೆ ವರ್ಷ ತುಂಬುತ್ತದೆ. ಹೀಗಾಗಿ ನಾನು ಸಿಎಂ ಸ್ಥಾನದಲ್ಲೇ ಮುಂದುವರೆಯುತ್ತೇನೆ ಎಂದಿದ್ದಾರೆ. ಇದೇ ವೇಳೆ, ಸಿದ್ದರಾಮಯ್ಯ ಬಿಜೆಪಿ ನಾಯಕರ ಮೇಲೆ ತೀವ್ರ ಟೀಕೆ ನಡೆಸಿ, ಅವರು ಭವಿಷ್ಯಕಾರರಲ್ಲ. ಅವರ ಮಾತು ಯಾವತ್ತೂ ಸುಳ್ಳಾಗುತ್ತದೆ. ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ