ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದ ದುರ್ಘಟನೆ ಗ್ರಾಮವನ್ನು ಬೆಚ್ಚಿಬೀಳಿಸಿದೆ. ರೈತನೊಬ್ಬ ತನ್ನ ಕುಟುಂಬದವರನ್ನೇ ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿದ್ದರಿಂದ ಆರು ಮಂದಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ, ವಿಜಯ್ ಮೌರ್ಯ ಎಂಬ ರೈತನು ತನ್ನ ಇಬ್ಬರು ಮಕ್ಕಳನ್ನು ಹಳ್ಳಿಯಿಂದ ಮನೆಗೆ ಕರೆಸಿ, ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ತನ್ನ ಪತ್ನಿ ಮತ್ತು ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನೂ ಮನೆಯೊಳಗೆ ಕೂಡಿಹಾಕಿ, ಮನೆಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ. ಪರಿಣಾಮವಾಗಿ ವಿಜಯ್ ಮೌರ್ಯ, ಅವರ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಭೇಟಿ ನೀಡಲು ಬಂದಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
ಅಗ್ನಿ ಅವಘಡದಲ್ಲಿ ಮನೆ ಸಂಪೂರ್ಣ ಸುಟ್ಟುಹೋದಷ್ಟೇ ಅಲ್ಲದೆ, ಟ್ರ್ಯಾಕ್ಟರ್ ಹಾಗೂ ಒಳಗೆ ಕಟ್ಟಿ ಹಾಕಿದ್ದ ದನಗಳು ಸಹ ಸುಟ್ಟು ಬೂದಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ತರಲು ಗ್ರಾಮಸ್ಥರು ಶ್ರಮಿಸಿದರೂ ಜ್ವಾಲೆಗಳು ತೀವ್ರವಾಗಿ ಹರಡಿದ್ದರಿಂದ ನಂದಿಸಲು ಸಾಧ್ಯವಾಗಲಿಲ್ಲ. ನಂತರ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಅವಶೇಷಗಳಡಿ ಆರು ಮಂದಿ ಶವಗಳನ್ನು ಹೊರತೆಗೆದು, ಸ್ಥಳವನ್ನು ಪೊಲೀಸರು ಸುತ್ತುವರೆದಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ಆರಂಭವಾಗಿದ್ದು, ಗ್ರಾಮಸ್ಥರ ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಮೃತರ ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




