ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದು ಆಗಿರುವ ಗೃಹಲಕ್ಷ್ಮಿ ಯೋಜನೆ ಸತತವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿದ್ದು, ಇದೀಗ ರಾಮನಗರ ಜಿಲ್ಲೆಯ ಬಿ.ಕೆ. ತುಳಸಿ ಎಂಬ ಮಹಿಳೆಯೊಬ್ಬರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಳಸಿ ಅವರು ಪಡೆದ ಏಳು ತಿಂಗಳ ಗೃಹಲಕ್ಷ್ಮಿ ಹಣವನ್ನು ಸೇರಿಸಿ, ಮಹಾನವಮಿ ದಿನವಂದು ಹೊಸ ವಾಷಿಂಗ್ ಮಷಿನ್ ಖರೀದಿಸಿ, ಆಯುಧ ಪೂಜೆ ವೇಳೆ ಅದಕ್ಕೆ ಪೂಜೆ ಸಲ್ಲಿಸಿದರು. ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ರಾಮನಗರದ ಬಿ.ಕೆ. ತುಳಸಿ ಅವರ ಸಂಭ್ರಮ ನನ್ನ ಹಬ್ಬದ ಖುಷಿಗೆ ಇಮ್ಮಡಿತನ ನೀಡಿದೆ. ಸ್ತ್ರೀಸಬಲೀಕರಣದ ಆಶಯದೊಂದಿಗೆ ಜಾರಿಯಾದ ಗೃಹಲಕ್ಷ್ಮಿ ಯೋಜನೆ, ನವರಾತ್ರಿ ಸಂದರ್ಭದಲ್ಲಿ ಮಹಿಳೆಯರ ಸಂತೋಷಕ್ಕೆ ಕಾರಣವಾಗುತ್ತಿರುವುದು ಅರ್ಥಪೂರ್ಣ ಹಾಗೂ ಸಾರ್ಥಕ ಎಂದು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಇನ್ನೂ ಹಲವು ಕುಟುಂಬಗಳಿಗೆ ನಮ್ಮ ಯೋಜನೆ ನೆರವು ಇರಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಈ ಹಿಂದೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಪಾರ್ವತಮ್ಮ ಎಂಬ ಮಹಿಳೆಯೂ ಗೃಹಲಕ್ಷ್ಮಿಯಿಂದ ಸಿಕ್ಕ ಹಣವನ್ನು ಸೇರಿಸಿ, ಸಿಎಂ ಸಿದ್ದರಾಮಯ್ಯ ಅವರ ರೂಪದ ಕೆತ್ತನೆಯೊಂದಿಗೆ ಬಾಗಿಲು ನಿರ್ಮಿಸಿಕೊಂಡಿದ್ದರೆ, ಅವರು ಸಿದ್ದರಾಮಯ್ಯ ದೇವರು ಅವರ ಮುಖ ನೋಡಬೇಕು ಎಂದು ತಮ್ಮ ಭಕ್ತಿಭಾವ ವ್ಯಕ್ತಪಡಿಸಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

