ಅಮ್ಮನ ಲಾಲಿಯಿಲ್ಲದೆ, ಬೆಚ್ಚನೆಯ ಅಪ್ಪುಗೆಯಿಲ್ಲದೆ, ಚೂಪಾದ ಕಲ್ಲುಗಳ ನಡುವೆ ತೆರೆದ ಆಕಾಶವನ್ನು ನೋಡುವಂತಾಗಿದ್ದ ನವಜಾತ ಶಿಶು ಜೀವದ ಹೋರಾಟ ನಡೆಸುತ್ತಿತ್ತು. ಮೈಮೇಲೆ ಇರುವೆಗಳ ಸಾಲು ಹಾದರೂ, ಚಿಕ್ಕ ಉಸಿರನ್ನು ಹಿಡಿದು ಬದುಕುಳಿಯಲು ಯತ್ನಿಸುತ್ತಿತ್ತು. ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದ ಈ ಘಟನೆ ಎಲ್ಲರ ಹೃದಯವನ್ನೂ ತಟ್ಟಿದೆ. ತಂದೆ-ತಾಯಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು, ಈಗಾಗಲೇ ಮೂವರು ಮಕ್ಕಳ ಪೋಷಕರು.
ಇನ್ನೊಂದು ಗರ್ಭಾವಸ್ಥೆಯ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟಿದ್ದ ದಂಪತಿ, ಸರ್ಕಾರಿ ನಿಯಮದ ಭಯದಿಂದ ಕಠಿಣ ನಿರ್ಧಾರಕ್ಕೆ ಕೈ ಹಾಕಿದ್ದರು. ಮಧ್ಯಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಇದ್ದರೆ ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ನಿಯಮವಿದೆ. ಈ ಕಾರಣದಿಂದ ತಾವು ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿ, ಜನಿಸಿದ ಕೂಡಲೇ ನಾಲ್ಕನೇ ಮಗುವನ್ನು ಕಾಡಿನಲ್ಲೇ ಬಿಟ್ಟು ಪರಾರಿಯಾದರು.
72 ಗಂಟೆಗಳ ಕಾಲ ಮಗು ಪ್ರಕೃತಿಯ ಕಠೋರ ಪರೀಕ್ಷೆಗೆ ಗುರಿಯಾಯಿತು. ತಣ್ಣನೆಯ ವಾತಾವರಣ, ಕೀಟಗಳ ಕಾಟ, ಕಲ್ಲಿನ ನಡುವೆ ಉಸಿರುಗಟ್ಟುವ ಪರಿಸ್ಥಿತಿ—ಎಲ್ಲದರ ನಡುವೆ ಮಗು ಅದ್ಭುತವಾಗಿ ಬದುಕುಳಿಯಿತು. ಗ್ರಾಮಸ್ಥರು ಬೆಳಗಿನ ವಾಕಿಂಗ್ ವೇಳೆ ಕೂಗುವ ಶಬ್ದ ಕೇಳಿ ಹತ್ತಿರ ಹೋದಾಗ, ಕಲ್ಲುಗಳ ಮಧ್ಯೆ ರಕ್ತಸಿಕ್ತವಾಗಿದ್ದ ಶಿಶುವನ್ನು ಪತ್ತೆಹಚ್ಚಿ ತಕ್ಷಣ ರಕ್ಷಿಸಿದರು.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 23ರ ಬೆಳಗಿನ ಜಾವ ತಾಯಿ ರಾಜಕುಮಾರಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಕೆಲವೇ ಗಂಟೆಗಳಲ್ಲಿ ಮಗು ಕಾಡಿನಲ್ಲಿ ಬಿಟ್ಟುಹೋಗಲಾಯಿತು. ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮಗುವನ್ನು ಛಿಂದ್ವಾರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮಸ್ಥರ ಪ್ರಕಾರ—“ಯಾವ ಪೋಷಕರೂ ಇಂಥಾ ಕ್ರೂರ ನಿರ್ಧಾರ ಕೈಗೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




