ಕಳೆದ 7 ದಿನಗಳಿಂದ ಈ ಸ್ವಾಮಿಯ ಮಾತಿಲ್ಲ… ಊಟವಿಲ್ಲ..! ಎಲ್ಲದಕ್ಕೂ ಕಾರಣ ‘ಲೋಕ ಶಾಂತಿ’ಯ ಸಂಕಲ್ಪ! ಸಕ್ಕರೆನಾಡು ಮಂಡ್ಯದಲ್ಲಿ ಒಂದು ಅದ್ಭುತ ದೃಶ್ಯ ನಡೆಯುತ್ತಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಕಾರಣದಿಂದ ಈ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದೆ. ಈ ಅನಾಹುತ ತಡೆಯುವ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಇಲ್ಲೊಬ್ಬರು ಸ್ವಾಮೀಜಿ ತಮ್ಮ ಮಾತನ್ನೇ ನಿಲ್ಲಿಸಿದ್ದಾರೆ.
ಹೌದು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮೌನ ವ್ರತ ಮತ್ತು ಉಪವಾಸದಲ್ಲಿ ತಲ್ಲೀನರಾಗಿದ್ದಾರೆ. ಯಜ್ಞ ಯಾಗಗಳಿಂದ ಲೋಕ ಶಾಂತಿ ಮತ್ತು ಕಲ್ಯಾಣಕ್ಕಾಗಿ ಸೇವೆ ನಡೆಸುತ್ತಿದ್ದಾರೆ. ಈ ಸ್ವಾಮೀಜಿ ಸೆಪ್ಟೆಂಬರ್ 22ರಿಂದ ಸ್ವಾಮೀಜಿಗಳು ಮೌನ ವ್ರತ ಪ್ರಾರಂಭಿಸಿದ್ದಾರೆ. ಈಗಾಗಲೇ 7 ದಿನಗಳು ನಿಷ್ಟುರ ಮೌನದಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ, 9 ದಿನಗಳ ಉಪವಾಸವನ್ನೂ ಕೈಗೊಂಡಿದ್ದಾರೆ.
ಅಕ್ಟೋಬರ್ 3ರಂದು ಮಠದಲ್ಲಿ ‘ಚಂಡಿಕಾ ಹೋಮ’ ಆಯೋಜನೆ ಮಾಡಲಾಗಿದೆ. ಆ ದಿನ ಮುತ್ತೈದೆಯರು ಮತ್ತು ವಿಧವೆಯರ ಮಡಿಲು ತುಂಬಿಸುವಂತಹ ವಿಶೇಷ ಆಚರಣೆ ಸಹ ನಡೆಯಲಿದೆ. ಈ ಹಿನ್ನಲೆಯಲ್ಲಿ, ಸದ್ಯ ಚಂದ್ರವನ ಆಶ್ರಮ ಭಕ್ತಿಗಳಿಂದ, ಯಜ್ಞ ಶಬ್ದದಿಂದ, ಮತ್ತು ಶ್ರದ್ಧೆಯ ಶಾಂತಿಮಯ ವಾತಾವರಣದಿಂದ ತುಂಬಿರುವಂತಾಗಿದೆ.
ಸಾಮಾನ್ಯವಾಗಿ ಶಬ್ದ, ಉಪದೇಶಗಳಿಂದ ಸುತ್ತುವರೆದಿರುವ ಮಠವೊಂದರಲ್ಲಿ ಈಗ ಶಬ್ದವಿಲ್ಲದ ಮೌನವೇ ದೇವರ ಧ್ವನಿ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯ ಈ ಶ್ರಮ, ಶಾಂತಿಯ ಆಶಯಕ್ಕೆ ಇಡುತ್ತಿರುವ ಉಡುಗೊರೆಯಾಗಿದೆ.
ವರದಿ : ಲಾವಣ್ಯ ಅನಿಗೋಳ

