ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚರ್ಚೆಗೆ ಗ್ರಾಸರಾಗಿದ್ದಾರೆ. ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಭಾರತದಲ್ಲಿ ಪ್ರಜಾಪ್ರಭುತ್ವದ ರಚನೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರು.
ಭಾರತದ ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಶಕ್ತಿ ಮತ್ತು ಆರೋಗ್ಯ ವ್ಯವಸ್ಥೆಯಿಂದ ನನಗೆ ದೇಶದ ಬಗ್ಗೆ ಅಪಾರ ಆಶಾವಾದವಿದೆ. ಆದರೆ, ಭಾರತವು ಈಗ ಗಂಭೀರ ಅಪಾಯಗಳ ಎದುರಲ್ಲಿದೆ. ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ಭಾರತದ ಮುಂದೆ ಇರುವ ಅತಿ ದೊಡ್ಡ ಸವಾಲು. ಭಾರತವು ವಿಭಿನ್ನ ಸಂಸ್ಕೃತಿಗಳು, ಧರ್ಮಗಳು ಮತ್ತು ವಿಚಾರಧಾರೆಗಳ ನಡುವಿನ ಸಂಭಾಷಣೆಯಾಗಿದೆ. ಇಂತಹ ಸಂಭಾಷಣೆ ನಡೆಯಲು ಪ್ರಜಾಪ್ರಭುತ್ವವೇ ಉತ್ತಮ ಮಾರ್ಗ. ಆದರೆ ಈ ವ್ಯವಸ್ಥೆಯ ಮೇಲೆ ಈಗ ಸಂಪೂರ್ಣ ದಾಳಿ ನಡೆಯುತ್ತಿದೆ ಎಂದು ಅವರು ಎಚ್ಚರಿಸಿದರು.
ಚೀನಾದ ಮಾದರಿಯನ್ನು ಉಲ್ಲೇಖಿಸಿದ ಅವರು, ಚೀನಾದಲ್ಲಿ ಜನರ ಧ್ವನಿಯನ್ನು ದಮನಿಸುವ ಮೂಲಕ ಸರ್ವಾಧಿಕಾರಿ ವ್ಯವಸ್ಥೆ ನಡೆಯುತ್ತದೆ. ಆದರೆ ಭಾರತದ ವಿನ್ಯಾಸ ಅದನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಚೀನಾದ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದರು. ವಿದೇಶಿ ವೇದಿಕೆಯಿಂದ ಆಡಳಿತ ಪಕ್ಷವನ್ನು ಟೀಕಿಸುವುದು ರಾಹುಲ್ ಗಾಂಧಿಗೆ ಹೊಸದೇನಲ್ಲ. ಕಳೆದ ಹಲವು ವರ್ಷಗಳಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ಪದೇ ಪದೇ ವಿದೇಶದಲ್ಲೇ ತೀವ್ರ ಟೀಕೆಗಳನ್ನು ಮಾಡಿದ್ದಾರೆ. 2024ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದಾಗ, ಭಾರತೀಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿಗೆ ಸುಳ್ಳು ಹೇಳುವುದು ಮತ್ತು ಭಾರತವನ್ನು ಕೆಡವುದು ಅಭ್ಯಾಸವಾಗಿದೆ ಎಂದು ಆರೋಪಿಸಿದ್ದರು.
ಮೇ 2022ರಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಿಬಿಐ ಮತ್ತು ಇ.ಡಿ. ಸಂಸ್ಥೆಗಳ ದುರುಪಯೋಗದ ಮೂಲಕ ಭಾರತದ ಆತ್ಮದ ಮೇಲೆ ದಾಳಿ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಅವರು ಅದನ್ನು ಪಾಕಿಸ್ತಾನದ ಪರಿಸ್ಥಿತಿಗೆ ಹೋಲಿಸಿದರು. ಇದಕ್ಕೂ ಮುನ್ನ, 2018ರಲ್ಲಿ ಯುಕೆ ಮತ್ತು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಅಂದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಿದ್ದರು. ನಿರುದ್ಯೋಗದ ಕುರಿತು ಜನರ ಅಸಮಾಧಾನವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರನ್ನು ದೇಶಭಕ್ತರಲ್ಲ ಎಂದು ಟೀಕಿಸಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

