ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು, ಕುಣಿಗಲ್ ಶಾಸಕ ರಂಗನಾಥ್ ಉಪವಾಸ ಮಾಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಗರಗೆರೆ ಗ್ರಾಮದ, ದಲಿತ ಮಹಿಳೆ ಜಯಮ್ಮ ಎಂಬುವರ ಮನೆಯಲ್ಲಿ, ಮುದ್ದೆ ಸಾರು ಊಟ ಮಾಡಿ ಉಪವಾಸ ಅಂತ್ಯಗೊಳಿಸಿದ್ದಾರೆ.
ಉಪವಾಸ ಮುಗಿದ ಬಳಿಕ ಮಾತನಾಡಿದ ಶಾಸಕ ರಂಗನಾಥ್, ನವರಾತ್ರಿ ದಿನ ಹಲವರು ಸಂಕಲ್ಪ ಮಾಡಿ ಉಪವಾಸ ಮಾಡುವ ಮೂಲಕ, ಶಕ್ತಿ ದೇವತೆಗಳಿಂದ ವರ ಪಡೆಯುತ್ತಾರೆ. ಅದೇ ರೀತಿ ನಾನು 9 ದಿನಗಳ ಕಾಲ ಉಪವಾಸ ಮಾಡಿ, ಮೂರು ಸಂಕಲ್ಪ ಮಾಡಿದ್ದೇನೆ. ಅದರಲ್ಲಿ ನಮ್ಮ ಮನೆಯ ಮುಖ್ಯಸ್ಥರಿಗೆ, ಈ ರಾಜ್ಯದ ಉನ್ನತ ಹುದ್ದೆ ಸಿಗಬೇಕೆಂಬ ಸಂಕಲ್ಪವೂ ಒಂದಾಗಿದೆ.
ಇನ್ನು, ಕುಣಿಗಲ್ ತಾಲೂಕಿನಲ್ಲಿ ಹೆಚ್ಚಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿ ಮತ್ತು ಕುಣಿಗಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬುದು ಮುಖ್ಯ ಸಂಕಲ್ಪಗಳಾಗಿವೆ ಅಂತಾ ಶಾಸಕ ರಂಗನಾಥ್ ಹೇಳಿದ್ರು.
ವಿಜಯದಶಮಿಯ ಸಂಕಲ್ಪಗಳು ಈಡೇರುತ್ತವೆ ಎಂಬ ನಂಬಿಕೆ, ನಮ್ಮ ತಾಯಂದಿರಲ್ಲಿ ಇದೆ. ನಾನು ಕೂಡ ಮೊದಲು ದೇವರು, ಮಠ, ದೇಗುಲಗಳನ್ನು ನಂಬುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಾಗುತ್ತಿದೆ. ಹಿಂದೂ ಧರ್ಮದ ಸಂಪ್ರದಾಯದಂತೆ ಹಲವಾರು ದೈವಿಕ ಆಚಾರಗಳಲ್ಲಿ ತೊಡಗಿದ್ದೇನೆ.
ಡಿ.ಕೆ. ಶಿವಕುಮಾರ್ ಯಾವುದೇ ಪ್ರಧಾನಿ ಹೆಸರನ್ನು ಅಥವಾ ಮಾಜಿ ಮುಖ್ಯಮಂತ್ರಿ ಹೆಸರನ್ನು ಹೇಳಿಕೊಂಡು ಕೆಲಸ ಮಾಡುತ್ತಿಲ್ಲ. ತಮ್ಮ ಸ್ವಂತ ಪರಿಶ್ರಮ ಮತ್ತು ಜನಗಳ ಬೆಂಬಲದಿಂದ ಅವರು ಬೆಳೆಯುತ್ತಿದ್ದಾರೆ ಅಂತಾ, ಡಿಕೆಶಿ ಪರ ಬ್ಯಾಟ್ ಮಾಡಿದ್ದಾರೆ.

