ಬೆಂಗಳೂರಿನ ರಸ್ತೆ ಗುಂಡಿ ಮತ್ತು ಮೂಲಸೌಕರ್ಯ ಕೊರತೆ ಬಗ್ಗೆ, ಐಟಿ ಕಂಪನಿಗಳು ಧ್ವನಿ ಎತ್ತಿದ್ದಾಗ, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ತಮ್ಮ ರಾಜ್ಯಕ್ಕೆ ಬರುವಂತೆ ಕಂಪನಿಗಳಿಗೆ ಕರೆ ನೀಡಿದ್ದರು. ಬ್ಲಾಕ್ ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ, ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು.
ಬಳಿಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ ಮೇರೆಗೆ, ಬೆಂಗಳೂರು ತೊರೆಯುವುದಿಲ್ಲ ಎಂದು ಐಟಿ ಕಂಪನಿಗಳು ಸ್ಪಷ್ಟಪಡಿಸಿದ್ದವು. ಆದ್ರೀಗ ಬೆಂಗಳೂರಿನ ಮೂಲಸೌಕರ್ಯ ವಿಚಾರಕ್ಕೆ ಸಂಬಂಧಿಸಿದ ಚರ್ಚೆ, ಇಷ್ಟಕ್ಕೇ ಮುಗಿಯುತ್ತಿರುವಂತೆ ಕಾಣಿಸುತ್ತಿಲ್ಲ. ಆಂಧ್ರ ಸಚಿವ ನಾರಾ ಲೋಕೇಶ್ ಮತ್ತೆ ಟ್ವೀಟ್ ಮಾಡಿದ್ದು, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗೇ ತಿರುಗೇಟು ನೀಡಿದ್ದಾರೆ.
ಹದಗೆಡುತ್ತಿರುವ ಹೊರ ವರ್ತುಲ ರಸ್ತೆಯಿಂದಾಗಿ ಹೆಚ್ಚಿನ ಸ್ಟಾರ್ಟ್ಅಪ್‌ಗಳು ಮತ್ತು ಸಂಸ್ಥೆಗಳು, ಉತ್ತರ ಬೆಂಗಳೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಮುಖಮಾಡುತ್ತಿವೆ. ಹೀಗಂತ ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬುವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ರು. ಅದಕ್ಕೆ ಪ್ರತಿಕ್ರಿಯಿಸಿರುವ ನಾರಾ ಲೋಕೇಶ್, ಹೌದು ಉತ್ತರದ ಕಡೆ ಸ್ವಲ್ಪ ಚೆನ್ನಾಗಿದೆ. ಇನ್ನೂ ಸ್ವಲ್ಪ ಉತ್ತರಕ್ಕೆ ಬಂದರೆ ಅನಂತಪುರದಲ್ಲಿ ಚೆನ್ನಾಗಿದೆ. ಅಲ್ಲಿ ನಾವು ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಂ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.
ನಾರಾ ಲೋಕೇಶ್ ಟ್ವೀಟ್‌ಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ದುರ್ಬಲ ವ್ಯವಸ್ಥೆ ಇರುವವರು ಅದನ್ನು ಸುಧಾರಿಸಲು ಪ್ರಯತ್ನಿಸುವುದು ಸಾಮಾನ್ಯ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಆ ಪ್ರಯತ್ನ ತೀವ್ರ ಹತಾಶೆಯ ಹಂತಕ್ಕೆ ಹೋದಾಗ, ಮತ್ತಷ್ಟು ದುರ್ಬಲವೇ ಆಗುತ್ತದೆ. ಬೆಂಗಳೂರಿನಲ್ಲಿ 2035ರ ವೇಳೆಗೆ ಶೇಕಡ 8.5ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ.
2025ರ ವೇಳೆಗೆ ಅಂದಾಜು 14.4 ದಶಲಕ್ಷ ಜನಸಂಖ್ಯೆ ಇದ್ದು, ವಾರ್ಷಿಕ ಶೇಕಡ 2.76ರ ದರದಲ್ಲಿ ಬೆಳೆಯುತ್ತಿದೆ. ಇದು ಭಾರತದ ಪ್ರಮುಖ ವಲಸೆ ಕೇಂದ್ರಗಳಲ್ಲಿ ಒಂದಾಗಿದೆ ಎಂದು, ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ. ಇನ್ನೊಂದು ಜೀವಿಯಿಂದ ಪೋಷಕಾಂಶಗಳನ್ನು ಹೀರಿಕೊಂಡು ಬದುಕುವ ಜೀವಿಯನ್ನು, ಏನೆಂದು ಕರೆಯುತ್ತಾರೆಂದು ಪ್ರಶ್ನಿಸುವ ಮೂಲಕ ನಾರಾ ಲೋಕೇಶ್‌ಗೆ ಟಾಂಗ್ ಕೊಟ್ಟಿದ್ದಾರೆ.