ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಖರ್ಗೆ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಯೋಸಹಜ ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮಲ್ಲಿಕಾರ್ಜುನ ಖರ್ಗೆ ದಾಖಲಾಗಿದ್ರು. ಸದ್ಯ, ಖರ್ಗೆ ಅವರಿಗೆ ಫೇಸ್ ಮೇಕರ್ ಅಳವಡಿಕೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಹೃದಯ ಬಡಿತದ ಸ್ಥಿರೀಕರಣಕ್ಕೆ ಪೇಸ್ ಮೇಕರ್ ಅಳವಡಿಸಲು, ನಮ್ಮ ತಂದೆಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಫೇಸ್ ಮೇಕರ್ ಅಳವಡಿಕೆ ಯಶಸ್ವಿಯಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿದ್ದಾರೆ. 2-3 ದಿನಗಳ ವಿಶ್ರಾಂತಿ ಬಳಿಕ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು, ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿದೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ಅವರು ಬೇಗ ಗುಣಮುಖರಾಗಲಿ ಮತ್ತು ದೀರ್ಘಾಯುಷ್ಯ ಅವರದ್ದಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಸೆಪ್ಟೆಂಬರ್ 30ರಂದು ಮಲ್ಲಿಕಾರ್ಜುನ ಖರ್ಗೆ ಅವರು, ಎಂದಿನಂತೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆದರೆ, ಉಸಿರಾಟದ ಸಮಸ್ಯೆಯಿಂದಾಗಿ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ರು.