Sunday, October 5, 2025

Latest Posts

ರಾಜ್ಯಕ್ಕೆ ಮೋದಿ ಸರ್ಕಾರದಿಂದ ₹3,705 ಕೋಟಿ ತೆರಿಗೆ ಬಿಡುಗಡೆ

- Advertisement -

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1 ಲಕ್ಷ, 01 ಸಾವಿರದ 603 ಕೋಟಿ ರೂಪಾಯಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕಕ್ಕೆ ₹3,705 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯಗಳ ಅಭಿವೃದ್ಧಿ ವೆಚ್ಚಗಳಿಗೆ ಹಣಕಾಸು ಒದಗಿಸುವುದು, ಬಂಡವಾಳ ವೆಚ್ಚವನ್ನು ವೇಗಗೊಳಿಸುವುದು ಮತ್ತು ಮುಂಬರುವ ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 10ರಂದು ಬಿಡುಗಡೆಗೊಳ್ಳಬೇಕಿದ್ದ ಮಾಸಿಕ ₹81,735 ಕೋಟಿಯ ತೆರಿಗೆ ಪಾಲಿನೊಂದಿಗೆ ಹೆಚ್ಚುವರಿಯಾಗಿ ₹1,01,603 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎಲ್ಲಾ 28 ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ ಆಗಿದ್ದು, ಕರ್ನಾಟಕಕ್ಕೂ ಅದರ ಭಾಗವಾಗಿ ₹3,705 ಕೋಟಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ದಸರಾ ಹಾಗೂ ದೀಪಾವಳಿ ಹಬ್ಬಗಳ ಮುನ್ನವೇ ರಾಜ್ಯಗಳ ಹಣಕಾಸು ಚಟುವಟಿಕೆಗೆ ಬಲ ನೀಡುವ ಉದ್ದೇಶದಿಂದ ಈ ಮೊತ್ತವನ್ನು ಮುಂಗಡವಾಗಿ ಹಂಚಿಕೆ ಮಾಡಲಾಗಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳ ವೆಚ್ಚವನ್ನು ಹೆಚ್ಚಿಸಲು, ಬಂಡವಾಳ ಯೋಜನೆಗಳನ್ನು ವೇಗಗೊಳಿಸಲು ಈ ಹಣ ಉಪಯೋಗವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದೇ ವೇಳೆ, ಅತಿವೃಷ್ಟಿಯಿಂದ ರಾಜ್ಯದ ರೈತರು ತತ್ತರಿಸಿರುವ ಹಿನ್ನೆಲೆ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ನೆರವು ಒದಗಿಸಿದ್ದು, ಈ ನೆರವನ್ನು ಅನ್ನದಾತರಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರಗಳು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಸಲಹೆ ನೀಡಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss