ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವುಗಳ ಹಿನ್ನೆಲೆಯಲ್ಲಿ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಈ ಸಿರಪ್‌ನಲ್ಲಿ ಕಂಡು ಬಂದ ಡೈಎಥಿಲೀನ್ ಗ್ಲೈಕಾಲ್ ಅಂಶವೇ ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆಯು ರಾಜ್ಯದ ಎಲ್ಲಾ ಔಷಧಿ ಮಾರಾಟಗಾರರು ಹಾಗೂ ವಿತರಕರಿಗೆ ಈ ಸಿರಪ್ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲು ಕಠಿಣ ಸೂಚನೆ ನೀಡಿದೆ.
ಕೋಲ್ಡ್ರಿಫ್ ಕಾಫ್ ಸಿರಪ್ ನಿಷೇಧವು ಕರ್ನಾಟಕದಲ್ಲಿಯೇ ಅಲ್ಲ, ತಮಿಳುನಾಡು ಸಹ ಹೇರಿಕೊಂಡಿದ್ದು, ಎಲ್ಲಾ ಸ್ಟಾಕ್‌ಗಳ ಮಾರಾಟವನ್ನು ತಕ್ಷಣ ನಿಲ್ಲಿಸಲಾಗಿದೆ. ಜನರು ಈಗಾಗಲೇ ಹೊಂದಿರುವ ಕೋಲ್ಡ್ರಿಫ್ ಸಿರಪ್ ಸ್ಟಾಕ್ ಕುರಿತು ಡ್ರಗ್ಸ್ ಕಂಟ್ರೋಲ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ 9 ಮತ್ತು ರಾಜಸ್ಥಾನದಲ್ಲಿ 2 ಮಕ್ಕಳ ಸಾವುಗಳು ನಕಲಿ ಕೆಮ್ಮಿನ ಸಿರಪ್ ಸೇವನೆಯಿಂದ ಸಂಭವಿಸಿದ್ದು, ಈ ಸಿರಪ್‌ಗಳನ್ನು ತಡೆಯಲು ಸರ್ಕಾರ ತೀವ್ರ ಕ್ರಮ ತೆಗೆದುಕೊಂಡಿದೆ. ಪ್ರಸ್ತುತ, ಕೋಲ್ಡ್ರಿಫ್ ಮತ್ತು ನೆಸ್ಟೋ ಡಿಎಸ್ ಕಾಫ್ ಸಿರಪ್‌ಗಳ ಮಾರಾಟವು ಪರೀಕ್ಷಾ ವರದಿಗಳು ಬರುವವರೆಗೆ ನಿಷೇಧಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಎರಡು ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾಫ್ ಸಿರಪ್ ನೀಡಬಾರದು ಎಂದು ವೈದ್ಯರಿಗೆ ಮಾರ್ಗಸೂಚಿ ನೀಡಿದ್ದು, ಜನರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ಶಾಸಕ ಸಚಿವ ಮಹದೇವಪ್ಪ ಅವರು, ಮಾರುಕಟ್ಟೆಗೆ ಔಷಧಿ ಬಿಡುಗಡೆ ಮಾಡುವ ಮುನ್ನಲೇ ಸೂಕ್ತ ತಪಾಸಣೆ ನಡೆಸಬೇಕಾಗಿತ್ತು; ಈಗ ‘ಬಳಸಬೇಡಿ’ ಎಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ