Sunday, October 5, 2025

Latest Posts

ದಸರಾ ಹೀರೋಸ್ ಹೋಗಿ ಬನ್ನಿ.. ಗಜಪಡೆಗೆ ಧನ್ಯವಾದಗಳ ಮಳೆ

- Advertisement -

ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಂತೆಯೇ, ನಗರವಾಸಿಗಳ ಮನಗಳಲ್ಲಿ ಭಾವನಾತ್ಮಕ ಕ್ಷಣವೂ ಮೂಡಿತು. ಕಳೆದ ಎರಡು ತಿಂಗಳುಗಳ ಕಾಲ ಮೈಸೂರಿನ ಅರಮನೆ ಆವರಣದಲ್ಲಿ ನೆಲೆಸಿದ್ದ ಗಜಪಡೆಗೆ ಸಾಂಪ್ರದಾಯಿಕ ರೀತಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಬೆಳಗಿನ ತಂಪಾದ ಗಾಳಿ, ಅರಮನೆಯ ಗಂಭೀರ ಸೌಂದರ್ಯ ಮತ್ತು ಆನೆಗಳ ಭವ್ಯ ಹಾಜರಾತಿ, ಈ ಎಲ್ಲವು ಸೇರಿ ವಿದಾಯ ಸಮಾರಂಭಕ್ಕೆ ವಿಶಿಷ್ಟ ಭಾವನಾತ್ಮಕ ವಾತಾವರಣ ನೀಡಿತು. ಅರಮನೆ ಆವರಣದಲ್ಲೇ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹಣ್ಣು, ಸಕ್ಕರೆಕಬ್ಬು ಮತ್ತು ವಿವಿಧ ತಿಂಡಿಗಳೊಂದಿಗೆ ಆನೆಗಳಿಗೆ ಗೌರವ ಸಲ್ಲಿಸಲಾಯಿತು.

 

14 ಆನೆಗಳು ಒಂದೇ ಸಮಯದಲ್ಲಿ ಸೊಂಡಿಲನ್ನೆತ್ತಿ ಜನರಿಗೆ ವಿದಾಯ ಹೇಳಿದ ಕ್ಷಣ, ಅಲ್ಲಿ ಹಾಜರಿದ್ದ ಎಲ್ಲರ ಮನವನ್ನು ಮುಟ್ಟಿತು. ಈ ಬಾರಿ ಜಂಬೂಸವಾರಿಯ ನಿಜವಾದ ಹೀರೋಗಳಾದ ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಏಕಲವ್ಯ, ಕಂಜನ್, ಧನಂಜಯ, ಲಕ್ಷ್ಮಿ, ಕಾವೇರಿ, ಶ್ರೀಕಂಠ, ಸುಗ್ರೀವ, ಗೋಪಿ, ರೂಪ ಮತ್ತು ಹೇಮಾವತಿ ಒಂದೊಂದಾಗಿ ಲಾರಿಗಳಿಗೆ ಏರಲಾರಂಭಿಸಿದಾಗ, ಜನರೆಲ್ಲರೂ ಒಂದು ಕ್ಷಣಕ್ಕೆ ಭಾವುಕಾರದರು. ಗಜಪಡೆ ಕೇವಲ ಮೆರವಣಿಗೆಯ ಭಾಗವಷ್ಟೇ ಅಲ್ಲ, ಎರಡು ತಿಂಗಳು ನಗರದಲ್ಲಿ ಜನರ ಹೃದಯಗಳಿಗೂ ಹತ್ತಿರವಾಗಿದ್ದವು.

ಅರಮನೆ ಎದುರು ಪ್ರವಾಸಿಗರು, ಮಕ್ಕಳು ಹಾಗೂ ಕುಟುಂಬಸ್ಥರು ಈ ದೈತ್ಯ ಮಿತ್ರರ ಜೊತೆ ಸೆಲ್ಫಿ ಕ್ಲಿಕ್‌ ಮಾಡಲು ಮುಗಿಬಿದ್ದರು. ಮಕ್ಕಳು ಆನೆಗಳಿಗೆ ಕೈ ಬೀಸಿ ಮತ್ತೆ ಬನ್ನಿ ಎಂದು ಕೂಗುತ್ತಿದ್ದರೆ, ಹಿರಿಯರು ಹಳೆಯ ದಸರಾ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಆ ಕ್ಷಣಗಳಲ್ಲಿ ಸಂತೋಷವೂ ಇತ್ತು, ವಿದಾಯದ ನೋವೂ ಇತ್ತು. ಆನೆಗಳೂ ಸಹ ತಮ್ಮ ಸೊಂಡಿಲುಗಳನ್ನೆತ್ತಿ ಜನರತ್ತ ನೋಡುವಾಗ, ಅವುಗಳಿಗೂ ಈ ನಗರ ಮತ್ತು ಈ ಜನರೊಂದಿಗೆ ಬಾಂಧವ್ಯ ಬೆಳೆದಂತಿತ್ತು.

ಲಾರಿಗಳು ನಿಧಾನವಾಗಿ ಅರಮನೆ ವೃತ್ತವನ್ನು ಬಿಟ್ಟು ಹೊರಟಾಗ, ಅಲ್ಲಿ ಕ್ಷಣಕಾಲ ಮೌನ ಆವರಿಸಿತು. ಕಾಡಿನತ್ತ ಪ್ರಯಾಣಿಸುತ್ತಿದ್ದ ಗಜಪಡೆಗೆ ಜನರು ಹೃದಯದಿಂದ ವಿದಾಯ ಹೇಳಿದರು. ದಸರಾ ಮುಗಿದರೂ, ಈ ಗಜಪಡೆಯ ಭವ್ಯ ಹಾಜರಾತಿ, ಜನರ ಜೊತೆಗಿನ ಆಪ್ತ ಬಾಂಧವ್ಯ ಮತ್ತು ಅದ್ಭುತ ಕ್ಷಣಗಳು ಮೈಸೂರಿನ ನೆನಪುಗಳಲ್ಲಿ ಸದಾ ಉಳಿಯಲಿವೆ. ಇದು ಕೇವಲ ಬೀಳ್ಕೊಡುಗೆ ಅಲ್ಲ ಮೈಸೂರಿನ ಸಂಸ್ಕೃತಿ, ಜನರ ಪ್ರೀತಿ ಮತ್ತು ಆನೆಗಳ ಮಮತೆ ಒಂದಾಗುವ ಮನಮುಟ್ಟುವ ಕ್ಷಣವಾಗಿತ್ತು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss