ದುರ್ಗಾ ವಿಗ್ರಹ ವಿಸರ್ಜನೆ ವೇಳೆ, ಒಡಿಶಾದ ಕಟಕ್ ನಗರದಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಸಂಭವಿಸಿತ್ತು. ಹಿಂಸಾಚಾರ ನಡೆದ 1 ದಿನದ ಬಳಿಕ ಮತ್ತೆ ಉದ್ವಿಗ್ನತೆ ತಾರಕಕ್ಕೇರಿದೆ. ಈ ಹಿನ್ನೆಲೆ ಕಟಕ್ ನಗರದ ಹಲವು ಭಾಗಗಳಲ್ಲಿ, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಈ ಸಮಯದಲ್ಲಿ ಮೊಬೈಲ್ ಇಂಟರ್ನೆಟ್, ಬ್ರಾಡ್‌ಬ್ಯಾಂಡ್, ವಾಟ್ಸಾಪ್, ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಸೇರಿದಂತೆ ಎಲ್ಲಾ ಆನ್‌ಲೈನ್ ಸಂದೇಶ ಸೇವೆಗಳು ಸಂಪೂರ್ಣವಾಗಿ ಬಂದ್ ಆಗಲಿವೆ.
ಇನ್ನು, ವಿಶ್ವ ಹಿಂದೂ ಪರಿಷತ್ ಇಂದು ಕಟಕ್‌ನಲ್ಲಿ 12 ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿದೆ. ಪ್ರಕರಣ ಸಂಬಂಧ ಇದುವರೆಗೆ 6 ಜನರನ್ನು ಬಂಧಿಸಲಾಗಿದೆ. ಸಿಸಿಟಿವಿ, ಡ್ರೋಣ್ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಇನ್ನೂ ಹಲವರನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಕಟಕ್ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, 13 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಟಕ್ ಪೊಲೀಸರ ಪ್ರಕಾರ ಅಕ್ಟೋಬರ್ 4ರ ಶನಿವಾರ ಮಧ್ಯರಾತ್ರಿ 1:30ರಿಂದ 2 ಗಂಟೆ ವೇಳೆ, ದರಘಾಬಜಾರ್ ಪ್ರದೇಶದ ಹಾಥಿ ಪೋಖಾರಿ ಬಳಿ, ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆ ಸಾಗುವಾಗ ಘರ್ಷಣೆ ಉಂಟಾಗಿದೆಯಂತೆ. ಮೆರವಣಿಗೆ ವೇಳೆ ಜೋರಾಗಿ ಸಂಗೀತ ನುಡಿಸುವುದನ್ನು ಕೆಲ ಸ್ಥಳೀಯರು ವಿರೋಧಿಸಿದಾಗ, ವಾಗ್ವಾದ ತೀವ್ರಗೊಂಡು ಹಿಂಸಾಚಾರಕ್ಕೆ ಕಾರಣವಾಗಿದೆ.