Monday, October 6, 2025

Latest Posts

ರಾಜ್ಯದಲ್ಲಿ ಭಾರೀ ಮಳೆ ‘ಆರ್ಭಟ’ ಅಕ್ಟೋಬರ್ 11ರವರೆಗೆ ಎಚ್ಚರಿಕೆ – ಹವಾಮಾನದಲ್ಲಿ ಯಾಕೆ ಬದಲಾವಣೆ?

- Advertisement -

ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಅಕ್ಟೋಬರ್ 11ರ ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಂತ ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೈನಂದಿನ ತೀವ್ರತೆಯಲ್ಲಿ ಕೆಲವೊಂದು ಬದಲಾವಣೆಗಳು ಇರಬಹುದು. ಆದ್ರೂ ಕೂಡ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ.

ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ಜಿಲ್ಲೆಗಳು ಮಳೆಯ ಪರಿಣಾಮ ಅನುಭವಿಸುತ್ತಿವೆ. ರಾಜ್ಯದ ಹಲವೆಡೆ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗುತ್ತಿದೆ. ಇನ್ನು ಕೆಲವೊಂದು ಪ್ರದೇಶಗಳಲ್ಲಿ ಕೇವಲ ಅಲ್ಪಾವಧಿಯ ಒಣ ಹವಾಮಾನ ಕಂಡುಬರಬಹುದು ಎಂದು ವರದಿಗಳು ತಿಳಿಸುತ್ತವೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಸೇರಿದಂತೆ ಹಲವೆಡೆ ಹೆಚ್ಚು ಮಳೆಯಾಗಲಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲೂ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನದಲ್ಲಿ ಏಕೆ ಈ ಬದಲಾವಣೆ? ಅನ್ನೋದನ್ನ ಗಮನಿಸಿದ್ರೆ
ಹವಾಮಾನ ಇಲಾಖೆಯ ಪ್ರಕಾರ, ಕಡಿಮೆ ಒತ್ತಡದ ಪ್ರದೇಶಗಳು ಮತ್ತು ಗಾಳಿಯ ಪ್ರಮಾಣದಲ್ಲಿನ ವ್ಯತ್ಯಾಸವೇ ಮಳೆಯ ಪ್ರಮುಖ ಕಾರಣವಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನಿಂದ ತಮಿಳುನಾಡಿನ ಕೊಮೊರಿನ್ ಪ್ರದೇಶದವರೆಗೆ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ಹರಡುವ ಕಡಿಮೆ ಒತ್ತಡದ ಪ್ರದೇಶಗಳು ಮಳೆಯ ಮೇಲೆ ಪರಿಣಾಮ ಬೀರುತ್ತಿವೆ.

ನೈಋತ್ಯ ಬಂಗಾಳಕೊಲ್ಲಿಯಲ್ಲಿಯೂ ಸುಮಾರು 3.1 ಕಿ.ಮೀ ಎತ್ತರದ ಗಾಳಿಯ ಪ್ರವಾಹಗಳು ನಿರಂತರ ಮಳೆಗೆ ಕಾರಣವಾಗಿದೆ. ಮಳೆ ಮುಂದುವರಿದರೂ ಈ ವರ್ಷ ಬೆಂಗಳೂರಿನಲ್ಲಿ ಶೇ. 12ರಷ್ಟು ಮಳೆಯ ಕೊರತೆ ದಾಖಲಾಗಿದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನಗರದಲ್ಲಿ ಸರಾಸರಿ 452.4 ಮಿಮೀ ಮಳೆಯಾಗುತ್ತಿತ್ತು. ಆದರೆ 2025 ರಲ್ಲಿ ಕೇವಲ 396.5 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಮುಂದಿನ ವಾರ ಬೆಂಗಳೂರು ನಗರದಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಹಗುರ ಅಥವಾ ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ 15ರ ನಂತರ ಮಳೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ನಗರದಲ್ಲಿ ನೀರಿನ ಕೊರತೆಗೆ ತಾತ್ಕಾಲಿಕ ಪರಿಹಾರ ನೀಡಬಹುದಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss