ಮೊನ್ನೆ ಮೊನ್ನೆಯಷ್ಟೆ ಅದ್ದೂರಿಯಾಗಿ ನಡೆದ ನಾಡಹಬ್ಬ ದಸರಾದಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡಿ ವಿಜೃಂಭಿಸಿದ ನಂತರ, ಇಂದು ಚಾಮುಂಡಿ ಬೆಟ್ಟದಲ್ಲಿ ರಥಾರೂಢಳಾಗಿ ಭಕ್ತರಿಗೆ ಕೃಪ ಕಟಾಕ್ಷ ನೀಡಿದ್ದಾಳೆ.
ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಚಾಮುಂಡೇಶ್ವರಿಗೆ ಜಯವಾಗಲಿ… ಎಂಬ ಘೋಷಣೆ, ವಾದ್ಯಗೋಷ್ಟಿಗಳ ನಾದ, ಸಿಡಿಮದ್ದಿನ ಸದ್ದು, ಕಲಾ ತಂಡಗಳ ಪ್ರದರ್ಶನ ಆಗಿ ರಥೋತ್ಸವದ ಸಂಭ್ರಮವನ್ನು ಮತ್ತಷ್ಟು ಗಂಭೀರಗೊಳಿಸಿತು. ಸಾವಿರಾರು ಭಕ್ತರು ಒಕ್ಕೂರಲಿನಿಂದ ನಾಡದೇವತೆಯ ಜೈಕಾರ ಕೂಗಿ, ಬಾಳೆಹಣ್ಣು ಹಾಗೂ ಜವನ ಎಸೆದು ಭಕ್ತಿಭಾವದಿಂದ ಪ್ರಾರ್ಥಿಸಿದರು.
ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಿದರು. ಬಳಿಕ ಯದುವೀರ ಅವರು ಸ್ವತಃ ರಥದ ಹಗ್ಗ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಯದುವೀರ ಅವರ ಪತ್ನಿ ತ್ರಿಷಿಕಾ ಕುಮಾರಿ, ಹಾಗೂ ಶಾಸಕ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದರು.
ಚಿನ್ನದ ಅಂಬಾರಿಯಿಂದ ರಥೋತ್ಸವದವರೆಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಜಯಯಾತ್ರೆಯೊಂದಿಗೆ ಈ ಬಾರಿ ದಸರಾ ಸಂಭ್ರಮಕ್ಕೆ ಸಾಂಪ್ರದಾಯಿಕವಾಗಿ ತೆರೆ ಬಿದ್ದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ