ಮಹತ್ವದ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗವು, ಈ ಬಾರಿ ಮತದಾರರ ಸಂಖ್ಯೆ ಕುರಿತು ಅಚ್ಚರಿಯ ಮಾಹಿತಿ ಬಿಡುಗಡೆ ಮಾಡಿದೆ. ಆಯೋಗದ General Overview of Electors ವರದಿ ಪ್ರಕಾರ, ಬಿಹಾರದಲ್ಲಿ 100 ವರ್ಷ ಮೇಲ್ಪಟ್ಟ ಸುಮಾರು 14 ಸಾವಿರ ಮತದಾರರು ಇದ್ದಾರೆ. ಅಂದರೆ, ಭಾರತದ ಶತಾಯಿಷಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಕೇವಲ ಬಿಹಾರದಲ್ಲಿಯೇ ಇರುವಂತಾಗಿದೆ.
ಆಯೋಗದ ವರದಿ ಪ್ರಕಾರ, ಬಿಹಾರದ ಒಟ್ಟು ಮತದಾರರ ಸಂಖ್ಯೆ 7.43 ಕೋಟಿ. ಇದರಲ್ಲಿ 3.92 ಕೋಟಿ ಪುರುಷರು, 3.50 ಕೋಟಿ ಮಹಿಳೆಯರು, ಮತ್ತು 1,725 ತೃತೀಯ ಲಿಂಗದ ಮತದಾರರು ಇದ್ದಾರೆ. ಈ ಪೈಕಿ ಸುಮಾರು 7.2 ಲಕ್ಷ ವಿಕಲಚೇತನ ಮತದಾರರಿಗೆ ವೀಲ್‌ಚೇರ್, ಮನೆಯಲ್ಲೇ ಮತದಾನ ವ್ಯವಸ್ಥೆ ಮುಂತಾದ ವಿಶೇಷ ಸೌಲಭ್ಯಗಳು ನೀಡಲಾಗುತ್ತಿವೆ. ಜೊತೆಗೆ, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 4.04 ಲಕ್ಷ ಮಂದಿ ಇದ್ದು, ಅವರಲ್ಲಿ 14 ಸಾವಿರ ಜನ ಶತಾಯಿಷಿಗಳು ಎಂದು ವರದಿ ತಿಳಿಸಿದೆ.
ಇದೇ ವೇಳೆ, ದೇಶದ ಹೊರಗಿರುವ ಸೇವಾ ಮತದಾರರು 1.63 ಲಕ್ಷ, ಮತ್ತು 20 ರಿಂದ 29 ವರ್ಷ ವಯಸ್ಸಿನ ಯುವ ಮತದಾರರು 1.63 ಕೋಟಿ ಮಂದಿ ಇದ್ದಾರೆ. ಇವರಲ್ಲಿ 14.01 ಲಕ್ಷ ಜನ ಮೊದಲ ಬಾರಿಗೆ ಮತ ಹಾಕುತ್ತಿರುವವರು. ಈ ಅಂಕಿಅಂಶಗಳು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಎಲ್ಲ ವರ್ಗಗಳ ಜನರ ಭಾಗವಹಿಸುವಿಕೆ ಮತ್ತು ಸಮಾನ ಪ್ರತಿನಿಧಿತ್ವವನ್ನು ತೋರಿಸುತ್ತವೆ.
ಇದ್ರೊಂದಿಗೆ, ಬಿಹಾರ ವಿಧಾನಸಭೆಯ ಒಟ್ಟು 243 ಕ್ಷೇತ್ರಗಳ ವಿವರ ನೀಡಿರುವ ಆಯೋಗವು, ಅದರಲ್ಲಿ 203 ಸಾಮಾನ್ಯ ವರ್ಗಕ್ಕೆ, 38 ಪರಿಶಿಷ್ಟ ಜಾತಿಗೆ, ಹಾಗೂ 2 ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದೆ. ಇದು ಸಾಮಾಜಿಕ ಸಮಾನತೆ ಮತ್ತು ಪ್ರತಿನಿಧಿತ್ವವನ್ನು ಖಚಿತಪಡಿಸುವ ಉದ್ದೇಶದ ಕ್ರಮವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ