ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದೇವಾಲಯದ ದರ್ಶನಕ್ಕಾಗಿ ಪಾದಯಾತ್ರೆಯಲ್ಲಿ ತೊಡಗಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿ ನಡೆದಿದೆ. ಮೃತರನ್ನು 40 ವರ್ಷದ ಅನ್ನಪೂರ್ಣ, 25 ವರ್ಷದ ಪ್ರಕಾಶ್, 19 ವರ್ಷದ ಶರಣಪ್ಪ ಎಂದು ಗುರುತಿಸಲಾಗಿದೆ. ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿಗಳಾಗಿದ್ದಾರೆ.
ಮೃತರು ಸೇರಿದಂತೆ ಒಟ್ಟು ಏಳು ಮಂದಿ, ಕೊಪ್ಪಳ ತಾಲೂಕಿನಲ್ಲಿರುವ ಪ್ರಸಿದ್ಧ ಹುಲಿಗೇಮ್ಮ ದೇವಸ್ಥಾನದ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ಹೊರಟಿದ್ದರು. ಎರಡು ದಿನಗಳ ಹಿಂದೆಯೇ ಪಾದಯಾತ್ರೆ ಆರಂಭಿಸಿದ್ರು. ಇಂದು ಮುಂಜಾನೆ ಅಂದ್ರೆ ಮಂಗಳವಾರ ಅವರು ದೇವಸ್ಥಾನಕ್ಕೆ ಕೇವಲ ಮೂರು ಗಂಟೆಗಳ ದೂರವಿದ್ದಾಗಲೇ ಈ ಭೀಕರ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಮಲ್ಲಿಕಾರ್ಜುನ ಮ್ಯಾಗೇರಿ, ಆದಪ್ಪ ಅಂಡಿ, ಸಿದ್ದಪ್ಪ ಅಂಡಿ ಮತ್ತು ಕಸ್ತೂರಿಯವ್ವ ಮ್ಯಾಗೇರಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಕಸ್ತೂರಿಯವ್ವರ ಬೆನ್ನುಮೂಳೆ ಮುರಿದಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಲ್ಪ ಹೊತ್ತು ಕಳೆದಿದ್ರೆ ನಾವು ದೇವಾಲಯ ತಲುಪುತ್ತಿದ್ವು. ಆದರೆ ಈಗ ದೇವರನ್ನು ನೋಡುವ ಆಸೆಯೂ ಇಲ್ಲ. ಇಂತಹ ಅಪಘಾತಗಳು ಆಗ್ತಿದ್ರೆ ದೇವರು ಯಾಕೆ ಬೇಕು ಅನ್ನಿಸುತ್ತದೆ. ರಸ್ತೆಯ ಮೇಲೆ ನಿಯಂತ್ರಣವಿಲ್ಲದೆ ಓಡುತ್ತಿರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಗಾಯಾಳು ಮಲ್ಲಿಕಾರ್ಜುನ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತಕ್ಕೀಡಾದ ಖಾಸಗಿ ಸ್ಲೀಪರ್ ಕೋಚ್ ಬಸ್ ಸಿಂಧೋಗಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ವಾಹನದ ಚಾಲಕ ಸಂತೋಷ್ನನ್ನು ಮುನಿರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮಕ್ಕೆ ಕ್ರಮಕೈಗೊಳ್ಳಲಾಗಿದೆ.
ವರದಿ : ಲಾವಣ್ಯ ಅನಿಗೋಳ