ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಪದೇ, ಪದೇ ನಿಜವಾಗುತ್ತದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಮ್ಮಾರನಹಳ್ಳಿ ಗ್ರಾಮದಲ್ಲಿ ನಡೆದ ಈ ಘಟನೆ ಇದಕ್ಕೆ ಉದಾಹರಣೆಯಾಗಿದೆ.
ಆಸ್ತಿ ವಿವಾದಕ್ಕೆ ಪೊಲೀಸರ ಎದುರೇ ಅಣ್ಣ ತಮ್ಮಂದಿರು, ಮಕ್ಕಳ ಮಧ್ಯೆ ಭಾರೀ ಕಾಳಗ ನಡೆದಿದೆ. ರುದ್ರಪ್ಪ -ಹಾಲೇಶಪ್ಪ ಕುಟುಂಬಗಳ ಮಧ್ಯೆ, ಅಡಿಕೆ ಕಟಾವು ಮಾಡುವ ವಿಚಾರಕ್ಕೆ ಹೊಡೆದಾಟವಾಗಿದೆ. ಆಸ್ತಿ ವಿಚಾರವಾಗೇ ನ್ಯಾಯಾಲಯಕ್ಕೂ ಅರ್ಜಿ ಹಾಕಲಾಗಿತ್ತು. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿದೆ. ಹೀಗಾಗಿ ಅಡಿಕೆ ಕಟಾವು ಮಾಡಲು ಬಂದಿರುವುದಾಗಿ ಸಿದ್ದೇಶ ಎಂಬುವರು ಪಟ್ಟು ಹಿಡಿದಿದ್ರು.
ಇದೇ ವಿಚಾರದಲ್ಲಿ ವಾಗ್ವಾದ ಶುರುವಾಗಿದೆ. ತೋಟ ನನಗೆ ಸೇರಿದ್ದೆಂದು ಅಣ್ಣ ತಮ್ಮಂದಿರು, ಅವರ ಮಕ್ಕಳು ಕಲ್ಲಲ್ಲಿ ಹೊಡೆದುಕೊಂಡು ಜಗಳವಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು. ಕೊನೆಗೆ ಎರಡೂ ಕಡೆಯವರನ್ನು ಮತ್ತು ಅಡಿಕೆ ಕಟಾವು ಮಾಡಲು ಬಂದಿದ್ದ ಕಾರ್ಮಿಕರನ್ನೂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಘಟನೆ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.