Tuesday, October 14, 2025

Latest Posts

ಮೈಸೂರಲ್ಲಿ ಹಾಡುಹಗಲೇ ಬರ್ಬರ ಹತ್ಯೆ : ಹಳೆಯ ವೈಷಮ್ಯವೇ ಕಾರಣ?

- Advertisement -

ಮೈಸೂರು ವಸ್ತುಪ್ರದರ್ಶನ ಮೈದಾನದ ಸಮೀಪ ಮಧ್ಯಾಹ್ನ ನಡೆದ ಭೀಕರ ಘಟನೆ ನಗರವನ್ನೇ ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಮುಖಾಮುಚ್ಚಿ, ಅಲಿಯಾಸ್ ಗಿಲಿಗಿಲಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ವೆಂಕಟೇಶ್ ಕಾರಿನಲ್ಲಿದ್ದಾಗ ಯುವಕರ ಗುಂಪೊಂದು ಲಾಂಗ್ ಮತ್ತು ಇತರೆ ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿದೆ. ಕಾರಿನಿಂದ ಎಳೆದು ತಲೆ, ಕೈ, ಕಾಲು ಹಾಗೂ ದೇಹದ ವಿವಿಧ ಭಾಗಗಳ ಮೇಲೆ ಅತಿದಾರೂಣವಾಗಿ ಹೊಡೆದ ಪರಿಣಾಮ, ವೆಂಕಟೇಶ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ದಾಳಿ ನಂತರ ದುಷ್ಕರ್ಮಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕೊಲೆ ಹಳೆ ವೈಷಮ್ಯ ಮತ್ತು ಪ್ರತೀಕಾರದ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲ ದಿನಗಳ ಹಿಂದೆ ವರುಣಾ ಗ್ರಾಮದ ಹೋಟೆಲ್ ಮುಂದೆ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಕೊಲೆಯಾಗಿದ್ದನು. ಕಾರ್ತಿಕ್ ಮತ್ತು ವೆಂಕಟೇಶ್ ನಡುವೆ ಆಪ್ತ ಸಂಪರ್ಕವಿದ್ದುದರಿಂದ, ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರವಿತ್ತ ಎಂಬ ಅನುಮಾನವೂ ಮೂಡಿತ್ತು. ಇದೇ ಹಿನ್ನೆಲೆಯಲ್ಲಿ ಕಾರ್ತಿಕ್‌ನ ಸ್ನೇಹಿತರು ಈ ದಾಳಿಯನ್ನು ಪ್ರತೀಕಾರದ ಭಾಗವಾಗಿ ನಡೆಸಿರಬಹುದು ಎಂದು ತನಿಖಾಧಿಕಾರಿಗಳು ಊಹಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ನಜರಬಾದ್ ಠಾಣೆ ಪೊಲೀಸರು, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಹಾಗೂ ಡಿಸಿಪಿಗಳಾದ ಬಿಂದುರಾಣಿ ಮತ್ತು ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss