ಜಿಲ್ಲೆಯ ಇಬ್ಬರು ಸ್ನೇಹಿತರ ಹೃದಯಸ್ಪರ್ಶಿ ಕಥೆ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದು, ನೇರವಾಗಿ ವಿಶ್ವದ ಅತಿದೊಡ್ಡ ಚಲನಚಿತ್ರ ವೇದಿಕೆಯಾದ ಆಸ್ಕರ್ ಪ್ರಶಸ್ತಿ ಸ್ಪರ್ಧೆವರೆಗೂ ತಲುಪಿದೆ. ಲಾಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಯೋರಿ ಎಂಬ ಸಣ್ಣ ಹಳ್ಳಿಯಿಂದ ಪ್ರಾರಂಭವಾದ ಈ ಕಥೆ ಇದೀಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
ನಿರ್ದೇಶಕ ನೀರಜ್ ಘಯ್ವಾನ್ ಅವರ ಹೋಮ್ಬೌಂಡ್ ಸಿನಿಮಾ, 2026ರ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸುದ್ದಿಗೋಷ್ಠಿ ನಡೆಸಿ ಈ ಘೋಷಣೆ ಮಾಡಿದೆ. ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಿಸಿರುವ ಈ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ ಹಾಗೂ ಜಾನ್ವಿ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಾಧನೆಯ ಬಗ್ಗೆ ಕರಣ್ ಜೋಹರ್ ಹರ್ಷ ವ್ಯಕ್ತಪಡಿಸಿ, “ಹೋಮ್ಬೌಂಡ್ ಸಿನಿಮಾ ಭಾರತದ ಅಧಿಕೃತ ಎಂಟ್ರಿಯಾಗಿ ಅಕಾಡೆಮಿ ಅವಾರ್ಡ್ಸ್ಗೆ ಆಯ್ಕೆಯಾಗಿರುವುದು ನಮಗೆ ದೊಡ್ಡ ಗೌರವದ ಸಂಗತಿ. ನೀರಜ್ ಘಯ್ವಾನ್ ಅವರ ಈ ಕೃತಿ ವಿಶ್ವದಾದ್ಯಂತ ಲಕ್ಷಾಂತರ ಜನರ ಮನಗಳಲ್ಲಿ ನಿಜಕ್ಕೂ ಛಾಪು ಮೂಡಿಸುತ್ತದೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ನೀರಜ್ ಘಯ್ವಾನ್ ಕೂಡಾ ತನ್ನ ಸಂತಸ ಹಂಚಿಕೊಂಡು, “ಆಸ್ಕರ್ ಸ್ಪರ್ಧೆಗೆ ಭಾರತದಿಂದ ನಮ್ಮ ಚಿತ್ರ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ನಮ್ಮ ಕಥೆಗಳನ್ನು ಜಗತ್ತಿಗೆ ಕೊಂಡೊಯ್ಯುವ ಈ ಅವಕಾಶಕ್ಕಾಗಿ ನಾನು ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಆಮಿರ್ ಖಾನ್ ನಿರ್ಮಿಸಿ, ಕಿರಣ್ ರಾವ್ ನಿರ್ದೇಶಿಸಿದ್ದ ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ಸ್ಪರ್ಧೆಗೆ ಕಳುಹಿಸಲಾಗಿದ್ದರೂ, ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ. ಈ ಬಾರಿ ಹೋಮ್ಬೌಂಡ್ ಸಿನಿಮಾ ಪ್ರಶಸ್ತಿಯನ್ನು ಗೆಲ್ಲುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಈಗಾಗಲೇ ಚಿತ್ರತಂಡಕ್ಕೆ ದೇಶದಾದ್ಯಂತದಿಂದ ಅಭಿನಂದನೆಗಳ ಸುರಿಮಳೆ ಬೀಳುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ