Tuesday, October 14, 2025

Latest Posts

ಸಂಪುಟ ಸುಳಿವು : ಮಂತ್ರಿಗಿರಿಗೆ ಲಾಬಿ ಶುರು! ಯಾರಿಗೆ ಅದೃಷ್ಟ?

- Advertisement -

ಸಚಿವ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸುಳಿವಿನ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಇತ್ತಿಚೆಗೆ ಮೌನವಾಗಿದ್ದ ಆಕಾಂಕ್ಷಿಗಳು ಈಗ ಸಕ್ರಿಯರಾಗಿದ್ದು, ವಿವಿಧ ರೀತಿಯಲ್ಲಿ ಲಾಬಿ ಕಾರ್ಯ ಆರಂಭಿಸಿದ್ದಾರೆ. ಎಲ್ಲವೂ ಯೋಜನೆಯಂತೆ ನಡೆದರೆ ವರ್ಷಾಂತ್ಯದಲ್ಲೇ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಬಹಳಷ್ಟಿದೆ.

ಒಂದು ಕಡೆ ಸಿಎಂ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಮುಂದಿನ ಅವಧಿಗೂ ಸಿಎಂ ಆಗಿಯೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಸಂಪುಟ ಪುನಾರಚನೆ ಕುರಿತು ಮೊದಲ ಬಾರಿಗೆ ಸೂಚನೆ ನೀಡಿದ್ದು, ಇದರಿಂದ ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಸಿದ್ದರಾಮಯ್ಯ ಅವರ ಹೇಳಿಕೆಯ ಬಳಿಕ ಸಚಿವ ಸ್ಥಾನದ ಕನಸು ಕಾಣುತ್ತಿರುವ ಆಕಾಂಕ್ಷಿಗಳ ಸಂಖ್ಯೆ ಎರಡು ಡಜನ್ ಗೂ ಮೀರಿ ಹೋಗಿದೆ. ಸಂಪುಟ ಪುನಾರಚನೆ ವೇಳೆ ತಮಗೂ ಅವಕಾಶ ಸಿಗುತ್ತದೆ ಎಂಬ ವಿಶ್ವಾಸದಿಂದ ಅವರು ಸಿಎಂ ಸುತ್ತಮುತ್ತ ಸಕ್ರಿಯರಾಗಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯನ್ನು ಭೇಟಿಯಾಡಿ ಲಾಬಿ ಕಾರ್ಯದಲ್ಲೂ ತೊಡಗಿದ್ದಾರೆ. ಖರ್ಗೆ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಾಲು ಸಾಲಾಗಿ ಭೇಟಿಗಳು ನಡೆಯುತ್ತಿವೆ.

ಡಿಸೆಂಬರ್ ವೇಳೆಗೆ ಸಂಪುಟ ಪುನಾರಚನೆ ನಡೆದರೆ ಹೈಕಮಾಂಡ್ ಯಾವ ಮಾನದಂಡ ಅನುಸರಿಸುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಸಚಿವರಾಗಿ ಕಾರ್ಯನಿರ್ವಹಿಸಿರುವವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳ ಬಗ್ಗೆ ಪಕ್ಷದ ಒಳಗೆ ಚರ್ಚೆ ಸಾಗುತ್ತಿದೆ. ಹೀಗಾಗಿ ಹೈಕಮಾಂಡ್ ಹಾಗೂ ಸಿಎಂ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss