ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳ ಚಿತ್ರಣ ಮೂಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಚಿವ ಸಂಪುಟ ಪುನರ್ರಚನೆಗೆ ತೀರ್ಮಾನ ಕೈಗೊಂಡಿದ್ದಾರೆ. ಈ ಕ್ರಮವನ್ನು ಸರ್ಕಾರದ “ಮೇಜರ್ ಸರ್ಜರಿ” ಎಂದು ಕರೆಯಲಾಗುತ್ತಿದ್ದು, ಕನಿಷ್ಠ 15ರಿಂದ ಗರಿಷ್ಠ 25 ಮಂದಿ ಹಾಲಿ ಸಚಿವರನ್ನು ಬದಲಿಸುವ ಕುರಿತು ಗಂಭೀರ ಚರ್ಚೆ ಆರಂಭವಾಗಿದೆ. ಸರ್ಕಾರಕ್ಕೆ 30 ತಿಂಗಳು ಪೂರೈಸುವ ವೇಳೆಗೆ ಹೊಸ ಮುಖಗಳೊಂದಿಗೆ ಬಲಿಷ್ಠ ಸಂಪುಟವನ್ನು ರಚಿಸುವ ಯೋಜನೆ ರೂಪಿಸಲಾಗಿದೆ.
ಈ ಬದಲಾವಣೆಯ ಭಾಗವಾಗಿ ಕೆಲ ಹಾಲಿ ಸಚಿವರಿಗೆ ಸಚಿವ ಸ್ಥಾನದಿಂದ ವಿದಾಯ ನೀಡಿ, ಅವರನ್ನು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಅದೇ ವೇಳೆ ಯುವ ಮುಖಂಡರು ಮತ್ತು ನಿಷ್ಠಾವಂತ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ವೇಳೆಗೆ ಹೊಸ ಸಂಪುಟವನ್ನು ಸಿದ್ಧಪಡಿಸುವ ಸಿಎಂ ತಂತ್ರ ರೂಪಿಸಿದ್ದಾರೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಈ ಬದಲಾವಣೆಗಳು ಖಚಿತವಾಗುವ ಸಾಧ್ಯತೆ ಇದ್ದು, ಅಂತಿಮ ನಿರ್ಧಾರ ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಹೊರ ಬೀಳುವ ನಿರೀಕ್ಷೆಯಿದೆ.
ಸಂಪುಟ ವಿಸ್ತರಣೆ ಮತ್ತು ಪುನರ್ರಚನೆ ಕುರಿತು ಹೈಕಮಾಂಡ್ನೊಂದಿಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ಸಮಯ ಕೇಳಿದ್ದಾರೆ. ಅವರು ಶೀಘ್ರದಲ್ಲೇ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಹೈಕಮಾಂಡ್ ಯೋಜನೆಗೆ ಹಸಿರು ನಿಶಾನೆ ನೀಡಿದರೆ, ನಾಯಕತ್ವ ಬದಲಾವಣೆ ಕುರಿತ ಚರ್ಚೆ ತಾತ್ಕಾಲಿಕವಾಗಿ ಮುಂದೂಡಲ್ಪಡುವ ಸಾಧ್ಯತೆ ಇದೆ. ಇದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಕ್ಕೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದ್ದು, ಡಿಕೆಶಿ ಮೌನವಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸಂಪುಟ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸುವ ನಾಯಕರ ಪೈಕಿ ಬಿ.ಕೆ. ಹರಿಪ್ರಸಾದ್, ಸಲೀಂ ಅಹಮದ್, ನಾಗೇಂದ್ರ, ಬಸವರಾಜ ರಾಯರೆಡ್ಡಿ, ಅಪ್ಪಾಜಿ ನಾಡಗೌಡ, ಲಕ್ಷ್ಮಣ ಸವದಿ, ರೂಪ ಶಶಿಧರ್, ಶ್ರೀನಿವಾಸ್ ಜಿ.ಎಚ್., ಎಂ. ಕೃಷ್ಣಪ್ಪ, ಟಿ.ಬಿ. ಜಯಚಂದ್ರ, ರಿಜ್ವಾನ್ ಅರ್ಷದ್, ಯು.ಟಿ. ಖಾದರ್, ರಘುಮೂರ್ತಿ, ಶಿವಲಿಂಗೇಗೌಡ, ಎಚ್.ಸಿ. ಬಾಲಕೃಷ್ಣ, ಪಿ.ಎಂ. ನರೇಂದ್ರ ಸ್ವಾಮಿ ಮತ್ತು ಆನೇಕಲ್ ಶಿವಣ್ಣ ಅವರ ಹೆಸರುಗಳು ಚರ್ಚೆಯಲ್ಲಿವೆ. ಇವರಿಗೆ ಹೊಸ ಸಂಪುಟದಲ್ಲಿ ಅವಕಾಶ ಸಿಕ್ಕುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ