ತುಮಕೂರು ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ 6,19,767 ಫಲಾನುಭವಿಗಳ ಪೈಕಿ 11,585 ಮಂದಿ ಮೃತರಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ಈ ಶಂಕಾಸ್ಪದ ಖಾತೆಗಳಿಗೆ ಸಹ ಯೋಜನೆಯ ಹಣ ಜಮೆಯಾಗುತ್ತಿದೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಬೇಕೆಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೂಚಿಸಿದ್ದಾರೆ.
ಶುಕ್ರವಾರ ತುಮಕೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಇತ್ತೀಚೆಗೆ ₹2,549.07 ಕೋಟಿ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ. ಈ ಪೈಕಿ ಐಟಿ ಹಾಗೂ ಜಿಎಸ್‌ಟಿ ಇತರ ತಾಂತ್ರಿಕ ಕಾರಣಗಳಿಂದ 10,276 ಮಂದಿ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ. ಈ ದೋಷಗಳನ್ನು ಶೀಘ್ರ ಸರಿಪಡಿಸುವಂತೆ ದಿನೇಶ್ ಗೂಳಿಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಳೆದ 21 ತಿಂಗಳಲ್ಲಿ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ₹98,000 ಕೋಟಿ ವೆಚ್ಚವಹಿಸಿದೆ. ತುಮಕೂರು ಜಿಲ್ಲೆಗೆ ಇದುವರೆಗೆ ₹4,701 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈ ಹಣದ ದುರುಪಯೋಗವಾಗದಂತೆ ಮತ್ತು ಯಾವುದೇ ಅವ್ಯವಸ್ಥೆ ಉಂಟಾಗದಂತೆ ಖಚಿತಪಡಿಸಬೇಕು. ಎಲ್ಲಾ ಸ್ಥಳಗಳಲ್ಲಿ ಯೋಜನೆಯ ಪ್ರಚಾರಕ್ಕಾಗಿ ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸಬೇಕು ಎಂದು ಅವರು ಹೇಳಿದರು.
ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಖಾಸಗಿ ಮಾರುಕಟ್ಟೆಯಲ್ಲಿ ಮಾರುವ ತಕ್ಷಣ ತಡೆಯಬೇಕು. ಪಡಿತರ ಗೋದಾಮುಗಳಲ್ಲಿ ಸರಿಯಾದ ಸ್ಟಾಕ್ ನಿರ್ವಹಣೆ, ತೂಕದಲ್ಲಿ ತಪ್ಪು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಕೂಡ ದಿನೇಶ್ ಗೂಳಿಗೌಡ ಸೂಚನೆ ನೀಡಿದರು.
ವರದಿ : ಲಾವಣ್ಯ ಅನಿಗೋಳ