ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ಲಿಮಿಟೆಡ್ ಕರ್ನಾಟಕದ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ₹600 ಕೋಟಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದೆ. ಈ ಹೂಡಿಕೆ ಮೂಲಕ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರಸ್ತಾವಿಸಲಾಗಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ಕನ್ನಡಿಗರ ನಿಯೋಗ, ಇತ್ತೀಚೆಗೆ ಜಪಾನ್ ಪ್ರವಾಸ ಕೈಗೊಂಡಿತ್ತು. ಈ ವೇಳೆ HMSI ನ ಡೈರೆಕ್ಟರ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷೆ ನೋರಿಯಾ ಕೈಹರ ಅವರೊಂದಿಗೆ ಯಶಸ್ವಿ ಮಾತುಕತೆ ನಡೆಸಿ, ಈ ಮಹತ್ವದ ಒಪ್ಪಂದಕ್ಕೆ ಮುನ್ನುಡಿ ಹಾಕಲಾಗಿದೆ.
ಹೋಂಡಾ ಕಂಪನಿ ಈಗಾಗಲೇ ನರಸಾಪುರದಲ್ಲಿ 2.4 ಮಿಲಿಯನ್ ದ್ವಿಚಕ್ರ ವಾಹನಗಳ ಉತ್ಪಾದನೆ ಮಾಡುತ್ತಿದೆ. ಹೊಸ ಘಟಕವು ದೇಶೀಯವಾಗಿ ಮತ್ತು ಜಾಗತಿಕ ಮಟ್ಟಕ್ಕೆ ಆಕ್ಟಿವಾ ಇ ಮತ್ತು Q1 ಎಂಬ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಗೆ ನೆರವಾಗಲಿದೆ.
ಈ ಹೊಸ ಹೂಡಿಕೆ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ವ್ಯವಸ್ಥಾಪನಾ ಮತ್ತು ಆಡಳಿತಾತ್ಮಕ ಸಹಕಾರವನ್ನು ನೀಡಲಾಗುವುದು ಎಂಬ ಭರವಸೆಯನ್ನು ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗ ನೀಡಿದೆ.
ಕರ್ನಾಟಕದ ನಿಯೋಗ ಜಪಾನಿನ ಇತರ ಪ್ರಮುಖ ಕಂಪನಿಗಳಾದ ಮಿತ್ಸುಬಿಷಿ ಎಲೆಕ್ಟ್ರಿಕ್, ಯೊಕೊಗಾವಾ ಎಲೆಕ್ಟ್ರಿಕ್, ಟೋಕಿಯೋ ಎಲೆಕ್ಟ್ರಾನ್ ಮತ್ತು ರೆಸ್ಟಾರ್ ಸಂಸ್ಥೆಗಳನ್ನೂ ಭೇಟಿಯಾಗಿ, ರಾಜ್ಯದಲ್ಲಿ ಹೂಡಿಕೆಗೆ ಆಹ್ವಾನಿಸಿತು. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಮಾತುಕತೆಗಳು ನಿರಂತರ ನಡೆಯುತ್ತಿವೆ.
ವರದಿ : ಲಾವಣ್ಯ ಅನಿಗೋಳ