ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಗೆ ತೆರಳುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ–ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ಹೊಂದಿದ ರಾಷ್ಟ್ರಗಳು. ನಾನು ಅವರಿಬ್ಬರ ಮೇಲೂ ಶೇ.100 ರಿಂದ ಶೇ.200 ರವರೆಗೆ ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿ, ಯುದ್ಧವನ್ನು ತಡೆಹಿಡಿದೆ ಎಂದು ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಯನ್ನು ತಳ್ಳಿಹಾಕಿದ್ದರೂ, ಟ್ರಂಪ್ ತಮ್ಮ ನಿಲುವನ್ನು ಬದಲಾಯಿಸಿಲ್ಲ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು, ಕೈದಿ ವಿನಿಮಯ ವಿಚಾರವಾಗಿ ಇಸ್ರೇಲ್‌ಗೆ ಹೊರಟಾಗ ಮತ್ತೆ ಮಾತನಾಡಿದ ಟ್ರಂಪ್, ನಾನು ಜಾಗತಿಕವಾಗಿ ಎಂಟು ಸಂಘರ್ಷಗಳನ್ನು ಕೊನೆಗೊಳಿಸಿದ್ದೇನೆ. ಈ ವರ್ಷ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷವೂ ಅದರಲ್ಲಿ ಒಂದಾಗಿದೆ ಎಂದು ಪುನರಾವರ್ತಿಸಿದರು. ಆದರೆ ಭಾರತ ತನ್ನ ಸ್ಪಷ್ಟ ನಿಲುವಿನಲ್ಲಿ, ಮೇ 2025ರ ಆಪರೇಷನ್ ಸಿಂಧೂರ್ ನಂತರ ಘೋಷಿಸಲಾದ ಕದನ ವಿರಾಮಕ್ಕೆ ಯಾವುದೇ ಹೊರಗಿನ ಮಧ್ಯಸ್ಥಿಕೆ ಕಾರಣವಾಗಿಲ್ಲ, ಇದು ನೇರ ಮಿಲಿಟರಿ ಮಾತುಕತೆಗಳಿಂದ ಸಂಭವಿಸಿದೆ ಎಂದು ತಿಳಿಸಿದೆ.
ಟ್ರಂಪ್ ಇತ್ತೀಚೆಗಷ್ಟೇ ಗಾಜಾ ಕದನದ ಅಂತ್ಯಕ್ಕೂ ತಾನೇ ಕಾರಣ ಎಂದು ಹೇಳಿದ್ದು, ಮುಂದೆ ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವೆ ಉಂಟಾಗಬಹುದಾದ ಉದ್ವಿಗ್ನತೆಯ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದೇನೆ ಎಂದಿದ್ದಾರೆ. ತಮ್ಮ ಕಾಲಾವಧಿಯಲ್ಲಿ ಯುದ್ಧಗಳು ಸ್ಥಗಿತಗೊಂಡಿದ್ದು, ಕೋಟಿ ಜನರ ಪ್ರಾಣ ಉಳಿದಿವೆ ಎಂಬ ಭರವಸೆಗೂ ಅವರು ಬದ್ಧರಾಗಿದ್ದಾರೆ. ನಾನು ಶಾಂತಿಯ ಗತಿಯನ್ನು ತ್ವರಿತಗೊಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
2026 ರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಕ್ಕಾಗಿ ಪ್ರಚಾರ ನಡೆಸುತ್ತಿರುವ ಟ್ರಂಪ್, ನಾನು ಎಲ್ಲವನ್ನೂ ನೋಬೆಲ್‌ಗಾಗಿ ಮಾಡುತ್ತಿಲ್ಲ. ಜನರ ಜೀವ ಉಳಿಸುವುದೇ ನನ್ನ ಉದ್ದೇಶ. 2024 ರನ್ನೂ ಪರಿಗಣಿಸಲಾಗಿದೆ ಆದರೆ 2025 ರಲ್ಲಿಯೂ ಶಾಂತಿಗಾಗಿ ನಾನು ಮಾಡಿದ ಕೆಲಸಗಳು ಪ್ರಮುಖವಾಗಿವೆ ಎಂದು ಅವರು ವಾದಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ