ಯಲಹಂಕ ನ್ಯೂ ಟೌನ್‌ನಲ್ಲಿರುವ ಲಾಡ್ಜ್‌ನಲ್ಲಿ ಯುವಕ ಸುಟ್ಟ ಸ್ಥಿತಿಯಲ್ಲಿ ಹಾಗೂ ಯುವತಿ ಬಾತ್‌ರೂಂನಲ್ಲಿ ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಈ ಪ್ರಕರಣದ ಹಿನ್ನೆಲೆ ಈಗ ಬಯಲಾಗಿದೆ. ಮೃತ ಯುವತಿ ಮೂರು ಮಕ್ಕಳ ತಾಯಿ ಎನ್ನುವ ವಿಚಾರ ಮತ್ತು ಘಟನೆ ಸಮಯದಲ್ಲಿ ಸ್ಥಳದಲ್ಲಿದ್ದ ಮೂರನೇ ವ್ಯಕ್ತಿ ಕುರಿತು ಮಾಹಿತಿ ಬೆಳಕಿಗೆ ಬಂದಿದೆ. ಆ ವ್ಯಕ್ತಿಯು ಕಾವೇರಿಯ ಚಿಕ್ಕಪ್ಪನ ಮಗ ಪ್ರಶಾಂತ್ ಆಗಿದ್ದು, ಆತ ಪೊಲೀಸರ ಮುಂದೆ ಸಂಪೂರ್ಣ ಸತ್ಯ ಬಾಯ್ಬಿಟ್ಟಿದ್ದಾನೆ.
ಘಟನೆಯಿಂದ ಮೂರು ದಿನಗಳ ಹಿಂದೆ, ಗದಗ ಮೂಲದ 23 ವರ್ಷದ ರಮೇಶ್ ಬಂಡಿವಡ್ಡರ್ ಪೆಟ್ರೋಲ್ ಸುರಿದುಕೊಂಡು ಲಾಡ್ಜ್‌ನಲ್ಲೇ ಬೆಂಕಿ ಹಚ್ಚಿಕೊಂಡಿದ್ದ. ಬೆಂಕಿಯಿಂದ ಪಾರಾಗಲು ಬಾತ್‌ರೂಂಗೆ ಓಡಿದ ನವಲಗುಂದ ಮೂಲದ 25 ವರ್ಷದ ಕಾವೇರಿ ಬಡಿಗೇರ್ ಉಸಿರುಗಟ್ಟಿ ಸಾವನ್ನಪ್ಪಿದ್ದಳು. ಕಾವೇರಿಗೆ 2016ರಲ್ಲಿ ಹುನಗುಂದದಲ್ಲಿ ಮದುವೆಯಾಗಿತ್ತು ಮತ್ತು ಆಕೆ ಮೂರು ಮಕ್ಕಳ ತಾಯಿ. ಕೆಲಸಕ್ಕಾಗಿ ಎರಡು ತಿಂಗಳ ಹಿಂದೆ ಯಲಹಂಕದಲ್ಲಿನ ಸ್ಪಾದೊಂದರಲ್ಲಿ ಕೆಲಸ ಮಾಡಲು ಬಂದಿದ್ದಳು.
ಇತ್ತೀಚೆಗೆ ರಮೇಶ್‌ನೊಂದಿಗೆ ಆಕೆಗೆ ಪರಿಚಯ ಬೆಳೆದಿದ್ದು, ಅದು ಪ್ರೀತಿಗೆ ತಿರುಗಿತ್ತು. ರಮೇಶ್ ಮದುವೆಗೆ ಒತ್ತಾಯಿಸುತ್ತಿದ್ದರೆ, ಕಾವೇರಿ ನಿರಾಕರಿಸುತ್ತಿದ್ದಳು. ಈ ಕಾರಣದಿಂದ ಇಬ್ಬರ ಮಧ್ಯೆ ನಿತ್ಯ ಜಗಳಗಳು ನಡೆಯುತ್ತಿದುವು. ಘಟನೆಯ ದಿನ ಸಂಜೆ ಐದು ಗಂಟೆಗೆ ಇಬ್ಬರೂ ಲಾಡ್ಜ್‌ನಲ್ಲಿ ಭೇಟಿಯಾಗಿ ಮಾತನಾಡುತ್ತಿದ್ದಾಗ, ಪ್ರಶಾಂತ್ ಕೂಡ ರೂಮಿನಲ್ಲಿ ಹಾಜರಿದ್ದ. ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡಿತ್ತು. ಮಧ್ಯಾಹ್ನ ಪೆಟ್ರೋಲ್ ಬಾಟಲಿ ತಂದುಕೊಂಡು ಬಂದ ರಮೇಶ್, ಕಾವೇರಿಯನ್ನು ಹೆದರಿಸಲು ಹೋಗಿ ತನ್ನ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ.
ಗಾಬರಿಯಾದ ಕಾವೇರಿ ಬಾತ್‌ರೂಂಗೆ ಓಡಿ ಲಾಕ್ ಮಾಡಿಕೊಂಡು, ಸ್ಪಾದ ಸಹೋದ್ಯೋಗಿ ಹಾಗೂ ಲಾಡ್ಜ್ ಮಾಲೀಕನಿಗೆ ಫೋನ್ ಮಾಡಿ ಸಹಾಯ ಕೋರಿದ್ದಳು. ಆದರೆ ಅಷ್ಟರಲ್ಲೇ ಬೆಂಕಿಯಿಂದ ಉಂಟಾದ ಹೊಗೆ ಇಡೀ ಕಟ್ಟಡಕ್ಕೆ ಹರಡಿ ಹೋಗಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಿಟಕಿ ಒಡೆದು ಒಳಗೆ ಪ್ರವೇಶಿಸಿದರೂ, ರಮೇಶ್ ಸುಟ್ಟು ಕರಕಲಾಗಿದ್ದ ಹಾಗೂ ಕಾವೇರಿ ಉಸಿರುಗಟ್ಟಿ ಮೃತಪಟ್ಟಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ