ಇಬ್ಬರು ಸಹೋದರರು ಕೈ ತುಂಬಾ ಸಂಬಳದ ಉದ್ಯೋಗ ಬಿಟ್ಟು ಹಸುಗಳೊಂದಿಗೆ ಹೊಸ ಬದುಕು ಕಟ್ಟಿಕೊಂಡಿದ್ದಾರೆ ಅಂದ್ರೆ ನೀವು ನಂಬ್ತೀರಾ? ಹೌದು, ಇದು ನಿಜವಾದ ಯಶೋಗಾಥೆ! ಊರಿನ ಮಣ್ಣಿನ ಶಕ್ತಿ ಮತ್ತು ಕೃಷಿಯ ಮೇಲಿನ ನಂಬಿಕೆಯಿಂದ, ಹೈನೋದ್ಯಮದ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಈ ಇಬ್ಬರ ಪ್ರಯಾಣ ತುಂಬಾ ಪ್ರೇರಣಾದಾಯಕ.
ಸಕ್ಕರೆನಾಡಾದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕುರುಬಹಳ್ಳಿ ಗ್ರಾಮದ ಪ್ರಶಾಂತ್ ಮತ್ತು ಹರ್ಷ ಎಂಬ ಇಬ್ಬರು ಸಹೋದರರು ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವೀಧರರು. ಉತ್ತಮ ಸಂಬಳದ ಉದ್ಯೋಗವಿದ್ದರೂ, ನಗರ ಜೀವನ ಬಿಟ್ಟು ಗ್ರಾಮೀಣ ಬದುಕಿನತ್ತ ಮರಳಿದರು. ತಮ್ಮ ಊರಿನಲ್ಲೇ ಶ್ರೀಗೌರಿ ಆರ್ಗ್ಯಾನಿಕ್ ಡೈರಿ ಫಾರ್ಮಿಂಗ್ ಎಂಬ ಹೈನುಗಾರಿಕೆಯನ್ನು ಸ್ಥಾಪಿಸಿ ಹೊಸ ಅಧ್ಯಾಯ ಆರಂಭಿಸಿದರು.
ಇವರು 80 ಕ್ಕೂ ಹೆಚ್ಚು ಗೀರ್ ತಳಿಯ ಹಸುಗಳನ್ನು ಸಾಕುತ್ತಿದ್ದು, ಪ್ರತೀ ಲೀಟರ್ ಹಾಲನ್ನು ₹80–₹100 ಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಹಾಲಿನಿಂದ ತಯಾರಾಗುವ ಶುದ್ಧ ದೇಸಿ ತುಪ್ಪವನ್ನು ಆನ್ಲೈನ್ ಮೂಲಕ ಲೀಟರ್ಗೆ ₹2000 ಕ್ಕೆ ಮಾರಾಟ ಮಾಡುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಇವರ ಹೈನೋದ್ಯಮವು ಗ್ರಾಮೀಣ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿದೆ.
ಪಾರಂಪರಿಕ ಕೃಷಿ ಮೌಲ್ಯ ಮತ್ತು ಆಧುನಿಕ ತಂತ್ರಜ್ಞಾನವನ್ನು ಒಟ್ಟುಗೂಡಿಸಿ, ಇವರು ಮಾದರಿ ಸ್ಥಾಪಿಸಿದ್ದಾರೆ. ಪ್ರಶಾಂತ್ ಮತ್ತು ಹರ್ಷ ಈಗ ರೈತರಿಗೆ ಗೀರ್ ಹಾಗೂ ಶಾಹಿವಾಲ್ ತಳಿಯ ಹಸು ಸಾಕಾಣೆಯ ತರಬೇತಿಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೈನೋದ್ಯಮ ವಿಸ್ತರಣೆಯ ಯೋಜನೆ ಹೊಂದಿದ್ದಾರೆ. ಇವರು ನಗರ ಜೀವನ ಬಿಟ್ಟು ಊರಿಗೆ ಬಂದು ಹಸುಗಳ ಹಾಲಿನಿಂದ ತಮ್ಮ ಭವಿಷ್ಯ ಕಟ್ಟಿಕೊಂಡಿದ್ದು, ಅನೇಕ ರೈತರಿಗೆ ಪ್ರೇರಣೆಯಾಗಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ