ಬಿಟ್‌ಕಾಯಿನ್ ಬಿಸಿನೆಸ್‌ನಲ್ಲಿ ವಂಚನೆ – ಹೆಚ್ಚು ಲಾಭದ ಹೆಸರಿನಲ್ಲಿ ಹೂಡಿಕೆದಾರರಿಗೆ ಮೋಸ!

ಬಹುಕೋಟಿ ಬಿಟ್‌ಕಾಯಿನ್ ವಂಚನೆ ಪ್ರಕರಣದಲ್ಲಿ ಖ್ಯಾತ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಮತ್ತು ಅವರ ಪುತ್ರ ಅನೋಸ್ ಹಬೀಬ್ ಸಿಲುಕಿ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಇವರ ವಿರುದ್ಧ ಒಟ್ಟು 32 ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಹಬೀಬ್ ಮತ್ತು ಅವರ ಕುಟುಂಬ ದೇಶ ತೊರೆಯದಂತೆ ಲುಕ್‌ಔಟ್ ನೋಟಿಸ್ ಕೂಡಾ ಹೊರಡಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಜಾವೇದ್ ಹಬೀಬ್, ಅವರ ಪುತ್ರ ಹಾಗೂ ಸಹಚರರು ಹೂಡಿಕೆದಾರರಿಗೆ ಬಿಟ್‌ಕಾಯಿನ್‌ನಲ್ಲಿ ಹಣ ಮಾಡಿದರೆ “ಹತ್ತು ಪಟ್ಟು ಲಾಭ” ದೊರೆಯುತ್ತದೆ ಎಂಬ ಆಕರ್ಷಕ ಭರವಸೆ ನೀಡಿ ಕೋಟಿ ಕೋಟಿ ರೂಪಾಯಿ ವಂಚಿಸಿದ್ದಾರೆ. FLC ಎಂಬ ಸಂಸ್ಥೆಯ ಹೆಸರಿನಲ್ಲಿ ಹೂಡಿಕೆದಾರರಿಂದ ತಲಾ 5 ರಿಂದ 7 ಲಕ್ಷ ರೂಪಾಯಿ ವರೆಗೆ ಹಣ ಸಂಗ್ರಹಿಸಿ, ವಾರ್ಷಿಕ ಶೇ.50 ರಿಂದ 70ರಷ್ಟು ಲಾಭ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

ಆದರೆ, ಎರಡು ವರ್ಷ ಕಳೆದರೂ ಯಾವುದೇ ಲಾಭ ನೀಡದೆ ಕಾಣೆಯಾಗಿದ್ದರು. ಸಂಭಾಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ವಿಷ್ಣೋಯ್ ಅವರ ಪ್ರಕಾರ, ಆರಂಭಿಕ ತನಿಖೆಯಲ್ಲಿ ಆರೋಪಿಗಳು ಸುಮಾರು 5 ರಿಂದ 7 ಕೋಟಿ ರೂಪಾಯಿ ವಂಚನೆ ನಡೆಸಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಹಬೀಬ್, ಅವರ ಮಗ ಅನೋಸ್ ಹಾಗೂ ಸಹಚರ ಸೈಫುಲ್ ವಿರುದ್ಧ ಒಟ್ಟು 32 ದೂರುಗಳು ದಾಖಲಾಗಿವೆ.

ಹಬೀಬ್ ಪರ ವಕೀಲ ಪವನ್ ಕುಮಾರ್ ಅವರು, ನನ್ನ ಕಕ್ಷಿದಾರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿದರೂ, ಪೊಲೀಸರು ಹಬೀಬ್ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಈಗ ಆರೋಪಿಗಳ ಬ್ಯಾಂಕ್ ಖಾತೆಗಳು, ಹೂಡಿಕೆ ದಾಖಲೆಗಳು ಮತ್ತು ಕಂಪನಿ ವ್ಯವಹಾರಗಳ ಬಗ್ಗೆ ವಿವರವಾದ ಹಣಕಾಸು ತನಿಖೆ ಕೈಗೊಂಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author