ಸಿಲಿಕಾನ್ ವ್ಯಾಲಿ, ಐಟಿಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ಜನರ ತಾಳ್ಮೆ ಪರೀಕ್ಷಿಸುವ ಮಟ್ಟಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕುವುದು ಬೆಂಗಳೂರಿನ ಜನರ ದಿನಚರಿಯ ಭಾಗವಾಗಿಬಿಟ್ಟಿದೆ. ಸರ್ಕಾರ ಹಲವು ಕ್ರಮ ಕೈಗೊಂಡರೂ ಟ್ರಾಫಿಕ್ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಸಂಚಾರವನ್ನು ಸುಗಮಗೊಳಿಸಲು ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಪ್ರಾಧಿಕಾರ ದೊಡ್ಡ ಯೋಜನೆ ರೂಪಿಸಿದೆ. ಇದರಡಿ, ನಗರದಲ್ಲಿ ಬರೋಬ್ಬರಿ 12 ಫ್ಲೈ ಓವರ್‌ಗಳು ಮತ್ತು 126 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಈ ಯೋಜನೆಗಾಗಿ ಈಗಾಗಲೇ ಜಿಬಿಎ ಮೂರು ಕನ್ಸಲ್ಟೆಂಟ್‌ಗಳ ಮೂಲಕ ಟ್ರಾಫಿಕ್ ಮಾದರಿ ಮತ್ತು ವಾಹನ ಸಂಚಾರದ ಕುರಿತು ವಿಶ್ಲೇಷಣೆ ಆರಂಭಿಸಿದೆ. ಈ ಅಧ್ಯಯನದ ಆಧಾರದ ಮೇಲೆ ಎಲ್ಲೆಲ್ಲಿ ಫ್ಲೈ ಓವರ್‌ಗಳು ಮತ್ತು ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಬೇಕೆಂಬ ನಿಖರ ಪ್ಲ್ಯಾನ್ ತಯಾರಾಗಿದೆ. ಜೊತೆಗೆ ಹೊಸ ತಂತ್ರಜ್ಞಾನವಾದ UHPPFRC ಬಳಸಿ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ಯೋಜನೆಯ ತಾಂತ್ರಿಕ ವರದಿ ಸಿದ್ಧವಾದ ಬಳಿಕ ತಜ್ಞರ ಸಮಿತಿಗೆ ಸಲ್ಲಿಸಿ, ನಂತರ ಸರ್ಕಾರದ ಮುಂದೆ ₹18,000 ಕೋಟಿಗಳ ಪ್ರಸ್ತಾವನೆ ಮಂಡಿಸಲು BSMILE ಸಂಸ್ಥೆ ಸಜ್ಜಾಗಿದೆ ಎಂದು ಅದರ ನಿರ್ದೇಶಕ ಪ್ರಹ್ಲಾದ್ ತಿಳಿಸಿದ್ದಾರೆ.
ನಗರದ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದ ಫ್ಲೈ ಓವರ್‌ಗಳನ್ನು ನಿರ್ಮಿಸುವ ಪ್ಲ್ಯಾನ್ ರೂಪಿಸಲಾಗಿದೆ. MEI ಜಂಕ್ಷನ್, ಪೈಪ್ ಲೈನ್ ರೋಡ್, ದೊಡ್ಡಬಳ್ಳಾಪುರ ರೋಡ್, ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಹಾಗೂ ಆಡ್ಯರ್ ಭವನ್‌ಗಳ ಬಳಿ ಸಣ್ಣ ಫ್ಲೈ ಓವರ್‌ಗಳು ನಿರ್ಮಾಣವಾಗಲಿವೆ. ಮಿನರ್ವ್ ಸರ್ಕಲ್‌ನಿಂದ ಹಡ್ಸನ್ ಸರ್ಕಲ್, ಸಿರ್ಸಿ ಸರ್ಕಲ್‌ನಿಂದ ನಾಯಂಡಹಳ್ಳಿ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಹೊಸೂರು ರಸ್ತೆಯವರೆಗೆ ಮಧ್ಯಮ ಗಾತ್ರದ ಫ್ಲೈ ಓವರ್‌ಗಳು ನಿರ್ಮಾಣವಾಗಲಿವೆ. ಮತ್ತಿಕೆರೆ ಕ್ರಾಸ್‌ನಿಂದ ಟಿನ್ ಫ್ಯಾಕ್ಟರಿ, ನಾಗವಾರದಿಂದ ಬಾಗಲೂರು, ಹಲಸೂರು ಲೇಕ್‌ನಿಂದ ಬಾಗಲೂರು ಹಾಗೂ ವಿವೇಕಾನಂದ ಮೆಟ್ರೋದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ದೊಡ್ಡ ಗಾತ್ರದ ಫ್ಲೈ ಓವರ್‌ಗಳ ನಿರ್ಮಾಣ ಯೋಜನೆಯೂ ಇದೆ.
ಆದರೆ ಈ ಯೋಜನೆಗೆ ಕೆಲವು ಸವಾಲುಗಳೂ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಈಜೀಪುರ ಫ್ಲೈ ಓವರ್ ಕಾಮಗಾರಿ ವರ್ಷಗಳಿಂದ ಮುಗಿಯದೇ ಬಾಕಿ ಉಳಿದಿದೆ. ಇದೇ ರೀತಿಯಾಗಿ ಹೊಸ 12 ಫ್ಲೈ ಓವರ್‌ಗಳ ಕಾಮಗಾರಿ ಟ್ರಾಫಿಕ್ ದಟ್ಟಣೆ ನಡುವೆಯೇ ನಡೆಯಬೇಕಾದರೆ ಸಂಚಾರ ಅಡಚಣೆಗಳು ಉಂಟಾಗುವ ಆತಂಕವಿದೆ. ಆದಾಗ್ಯೂ, ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡಲು ಹಾಗೂ ನಗರ ಸಂಚಾರ ವ್ಯವಸ್ಥೆಗೆ ಶಾಶ್ವತ ಪರಿಹಾರ ಒದಗಿಸಲು ಜಿಬಿಎ ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಂದಾಗಿದೆ. ಬೆಂಗಳೂರಿನ ಭವಿಷ್ಯದ ಟ್ರಾಫಿಕ್ ಚಿತ್ರಣವನ್ನು ಬದಲಾಯಿಸುವತ್ತ ಇದು ಒಂದು ದೊಡ್ಡ ಹೆಜ್ಜೆಯಾಗಿ ಕಾಣಿಸುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ