ಬೆಂಗಳೂರು ಮೆಟ್ರೋಗೆ ಬಸವ ಮೆಟ್ರೋ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಅಕ್ಟೋಬರ್ 4ರಂದು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭದಲ್ಲಿ, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ವೀರಶೈವ-ಲಿಂಗಾಯತ ಸಮಾಜದವರು ಮೆಟ್ರೋಗೆ ಬಸವಣ್ಣನ ಹೆಸರಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಒತ್ತಾಯಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮೆಟ್ರೋ ಸಂಪೂರ್ಣ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ, ಇವತ್ತೇ ಬಸವ ಮೆಟ್ರೋ ಎಂದು ಘೋಷಿಸಿಬಿಡುತ್ತಿದ್ದೆ. ಆದರೆ ಇದು ಕೇಂದ್ರ–ರಾಜ್ಯ ಸಂಯುಕ್ತ ಯೋಜನೆ. ಆದ್ದರಿಂದ ಕೇಂದ್ರದ ಅನುಮತಿ ಅಗತ್ಯ. ಇಲ್ಲವಾದರೆ ನಾವು ಈಗಾಗಲೇ ಹೆಸರಿಡುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ, ಮೆಟ್ರೋಗೆ ಬಸವ ಮೆಟ್ರೋ ಎಂಬ ಹೆಸರಿಡುವ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದೂ ಸಿಎಂ ಘೋಷಿಸಿದ್ದರು. ಆದರೆ ಇದೀಗ ಈ ಹೇಳಿಕೆ ವಿವಾದಕ್ಕೀಡಾಗಿದೆ.
ಸಿಎಂ ಹೇಳಿಕೆಗೆ ವಿಶ್ವ ಒಕ್ಕಲಿಗ ಮಹಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 2015ರ ಡಿಸೆಂಬರ್ 2ರಂದು ನಾಯಂಡನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದ ಹಳೆಯ ಘಟನೆ ನೆನಪಿಸಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಜನಸ್ತೋಮ ಸಮ್ಮುಖದಲ್ಲಿ ಹಾಲಿ ವಿಜಯನಗರ ಶಾಸಕರಾದ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರು ಮೆಟ್ರೋಗೆ ನಾಡಪ್ರಭು ಕೆಂಪೇಗೌಡ ಮೆಟ್ರೋ ಎಂದು ಹೆಸರಿಡಬೇಕು ಎಂದು ವಿನಂತಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಈ ಮನವಿಯನ್ನು ಮುಕ್ತ ಮನಸ್ಸಿನಿಂದ ಪರಿಗಣಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ ಈಗ ಬಸವ ಮೆಟ್ರೋ ಎಂಬ ಹೆಸರಿನ ಶಿಫಾರಸು ಮಾಡುವುದಾಗಿ ಹೇಳಿರುವುದು ವ್ಯತಿರಿಕ್ತ ನಿಲುವಾಗಿ ಕಾಣಿಸುತ್ತಿದೆ ಎಂದು ಒಕ್ಕಲಿಗ ಮಹಾ ವೇದಿಕೆ ಟೀಕಿಸಿದೆ.
ಬೆಂಗಳೂರು ನಗರವನ್ನು ಕಟ್ಟಿದವರು ನಾಡಪ್ರಭು ಕೆಂಪೇಗೌಡರು. ಹಾಗಾಗಿ ಮೆಟ್ರೋಗೆ ಅವರ ಹೆಸರೇ ಸೂಕ್ತ” ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಮೆಟ್ರೋಗೆ ‘ಕೆಂಪೇಗೌಡ ಮೆಟ್ರೋ’ ಎಂದು ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿದ್ದಾರೆ. ಜೊತೆಗೆ ಬೆಂಗಳೂರಿನ 28 ಶಾಸಕರು, ರಾಜ್ಯ ಹಾಗೂ ಕೇಂದ್ರ ಸಚಿವರು ಮತ್ತು ನಾಲ್ಕು ಮಂದಿ ಸಂಸದರನ್ನು ಭೇಟಿಯಾಗಿ ಈ ಮನವಿಯನ್ನು ಅಧಿಕೃತವಾಗಿ ಸಲ್ಲಿಸುವ ಯೋಜನೆ ಇದೆ. ಒಟ್ಟಿನಲ್ಲಿ, ಬಸವ ಮೆಟ್ರೋ ನಾಮಕರಣದ ಶಿಫಾರಸಿನ ವಿಚಾರ ಇದೀಗ ವಿರೋಧದ ಸಿಡಿಲು ಎದುರಿಸುತ್ತಿದೆ.