ಮಾಜಿ ಸಚಿವ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ನೀಡಿದೆ. ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡು ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್, ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ, ಈ ನೋಟಿಸ್ ನೀಡಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 223ರ ಅಡಿ ದೂರುದಾರ ಸೆಂಥಿಲ್ ಹಾಗೂ ಸಾಕ್ಷಿ ಕಿರಣ್ಜಿತ್ ಸ್ವಯಂ ಹೇಳಿಕೆಗಳನ್ನು, 42ನೇ ಎಸಿಎಂಎಂ ನ್ಯಾಯಾಲಯ ದಾಖಲಿಸಿಕೊಂಡಿದೆ.
ಬಳಿಕ ಸೆಕ್ಷನ್ 223ರ ಅಡಿ ರೆಡ್ಡಿ ಅವರ ವಾದ ಆಲಿಸಲು ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದೆ. ಧರ್ಮಸ್ಥಳ ಪ್ರಕರಣದ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ನನ್ನ ವಿರುದ್ಧ ಆಧಾರ ರಹಿತ, ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿ ಮಾನಹಾನಿ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಂಥಿಲ್ ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಗಾಲಿ ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿಗೊಳಿಸಿದೆ.
ಸಸಿಕಾಂತ್ ಸೆಂಥಿಲ್ ಅವರು ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಜನಾರ್ದನ ರೆಡ್ಡಿ ಶಾಸಕರಾಗಿದ್ದರು. ರೆಡ್ಡಿ ಎಸಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ, ಸಿಇಸಿ ಮತ್ತು ಸಿಬಿಐಗೆ ನೆರವು ನೀಡಿದ್ದ ಸೆಂಥಿಲ್ ವಿರುದ್ಧ ರೆಡ್ಡಿ ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದ್ರು. 2025ರ ಆಗಸ್ಟ್ 18ರಿಂದ 21ರ ನಡುವೆ ರಾಜ್ಯದ ಹಲವು ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡಿರುವ ರೆಡ್ಡಿ, ಸಸಿಕಾಂತ್ ಅವರನ್ನು ‘ಹಿಂದು ವಿರೋಧಿ’, ಧರ್ಮಸ್ಥಳ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಎಂದು, ಆಧಾರ ರಹಿತ ಆರೋಪ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.