ಹಬ್ಬದ ಸಂಭ್ರಮದ ನಡುವೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಪಾಸ್ ಮಾರ್ಕ್ಗಳಲ್ಲಿ ಪ್ರಮುಖ ಬದಲಾವಣೆ ತರಲಾಗಿದ್ದು, ಎಸ್ಎಸ್ಎಲ್ಸಿಯಲ್ಲಿ ಇದೀಗ 33% ಅಂಕ ಪಡೆದರೆ ಉತ್ತೀರ್ಣ ಎಂಬ ನಿಯಮ ಜಾರಿಯಾಗಲಿದೆ. ಪಿಯುಸಿಯಲ್ಲಿ ಕೂಡಾ ಪಾಸ್ ಮಾರ್ಕ್ ಶೇಕಡಾ 30ಕ್ಕೆ ಇಳಿಕೆಯಾಗಿದೆ. ಇದುವರೆಗೆ ಎಸ್ಎಸ್ಎಲ್ಸಿಯಲ್ಲಿ ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ 35 ಅಂಕಗಳನ್ನು ಪಡೆಯಬೇಕಾಗಿತ್ತು, ಈಗ ಅದನ್ನು 33ಕ್ಕೆ ಇಳಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹೊಸ ನಿಯಮಗಳ ವಿವರ ನೀಡಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಲ್ಲಿ 206 ಅಂಕ ಗಳಿಸಿದರೆ ವಿದ್ಯಾರ್ಥಿ ಪಾಸ್ ಆಗಲಿದ್ದು, ಪ್ರತಿ ವಿಷಯದಲ್ಲಿ ಆಂತರಿಕ ಮತ್ತು ಬಾಹ್ಯ ಅಂಕಗಳನ್ನು ಸೇರಿಸಿ ಕನಿಷ್ಠ 33% ಇರಬೇಕು ಎಂದು ತಿಳಿಸಿದ್ದಾರೆ. ಪಿಯುಸಿಯಲ್ಲಿ 600 ಅಂಕಗಳಲ್ಲಿ 198 ಅಂಕ ಗಳಿಸಿದರೆ ತೇರ್ಗಡೆಯಾಗಬಹುದು. ಪ್ರತಿ ವಿಷಯದಲ್ಲೂ 30 ಅಂಕಗಳಿದ್ದರೆ ಸಾಕು, ಹಿಂದಿನಂತೆ 35 ಅಂಕಗಳ ಅವಶ್ಯಕತೆ ಇರೋದಿಲ್ಲ. ಈ ಹೊಸ ನಿಯಮ ಖಾಸಗಿ ಶಾಲೆಗಳಿಗೂ ಈ ಸಾಲಿನಿಂದಲೇ ಅನ್ವಯವಾಗಲಿದೆ.
ಈ ಬದಲಾವಣೆ CBSE ಮಾದರಿಯನ್ನು ಅನುಸರಿಸುತ್ತಿದ್ದು, ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ನ್ಯಾಯಸಮ್ಮತ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷಾ ಅಂಕಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳ ಉತ್ತೀರ್ಣತೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಆಂತರಿಕ ಪರೀಕ್ಷೆಯಲ್ಲಿ 20ಕ್ಕೆ 20 ಅಂಕಗಳನ್ನು ಪಡೆದಿದ್ದರೆ, ಲಿಖಿತ ಪರೀಕ್ಷೆಯಲ್ಲಿ ಕೇವಲ ಶೇಕಡಾ 13 ಅಂಕಗಳಿದ್ದರೂ ವಿದ್ಯಾರ್ಥಿ ಉತ್ತೀರ್ಣನೆಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಆಂತರಿಕ ಅಂಕಗಳನ್ನು ಸಂಪೂರ್ಣವಾಗಿ ಪರಿಗಣಿಸಲಾಗದೇ, ಲಿಖಿತ ಪರೀಕ್ಷೆಯಲ್ಲಿ ಶೇಕಡಾ 28 ಅಂಕಗಳು ಕಡ್ಡಾಯವಾಗಿತ್ತು. ಈಗ ಆ ನಿಯಮವನ್ನು ತೆಗೆದುಹಾಕಲಾಗಿದೆ.
ಈ ಹೊಸ ನಿಯಮವು 2025–26ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿದೆ. ಈ ವರ್ಷ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು, ಸಾಮಾನ್ಯ, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಈ ಬದಲಾವಣೆಯ ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು CBSE ಮಾದರಿಯಲ್ಲಿಯೇ ಪರೀಕ್ಷೆ ಎದುರಿಸಲಿದ್ದಾರೆ. ಒಟ್ಟಾರೆಯಾಗಿ, ಈ ಬದಲಾವಣೆಯು ವಿದ್ಯಾರ್ಥಿಗಳಿಗೆ ಉತ್ತೀರ್ಣತೆ ಸಾಧನೆ ಸುಲಭವಾಗುವಂತೆ ಮಾಡಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ