ಸರ್ಕಾರದಿಂದ ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಅನುದಾನ ಘೋಷಣೆ – ನಿಮ್ಹಾನ್ಸ್ ಮಾದರಿಯಲ್ಲಿ 2 ಹೊಸ ಆಸ್ಪತ್ರೆಗಳು!

ಕರ್ನಾಟಕ ಸರ್ಕಾರವು ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ನಿಮ್ಹಾನ್ಸ್ ಮಾದರಿಯ ಅಭಿವೃದ್ಧಿತ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಮಹತ್ವದ ನಿರ್ಣಯ ಕೈಗೊಂಡಿದೆ. ಪ್ರತಿಯೊಂದು ಸಂಸ್ಥೆಗೆ ₹100 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಿ ನೀಡಲಾಗಿದೆ.

ನಿಮ್ಹಾನ್ಸ್‌ ಮಾದರಿಯ ಆಸ್ಪತ್ರೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಆಯಾ ಭಾಗದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಕೈಗೆಟಕುವ ದರದಲ್ಲಿ ಒದಗಿಸಲು ಇದರಿಂದ ಅನುಕೂಲವಾಗಲಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್‌ಕೆ ಪಾಟೀಲ್‌ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ನಿಮ್ಹಾನ್ಸ್ ಮಾದರಿಯ ಆಸ್ಪತ್ರೆಗಳ ಸ್ಥಾಪನೆಯಿಂದ ಮೈಸೂರು ಮತ್ತು ಕಲಬುರಗಿ ಭಾಗದ ಜನತೆಗೆ ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯ ಮತ್ತು ತಂತ್ರಜ್ಞಾನದ ಚಿಕಿತ್ಸೆ ಕೈಗೆಟಕುವ ದರದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ ಸ್ಥಾಪನೆಗೆ ಅಗತ್ಯವಿರುವ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖರ್ಚುಮಾಡಲಾಗುವುದು ಎಂದು ಸಚಿವರು ಹೇಳಿದರು.

ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ 100 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು, ಅಗತ್ಯವಾದ ಉಪಕರಣಗಳನ್ನು ₹54.92 ಕೋಟಿ ವೆಚ್ಚದಲ್ಲಿ ಖರೀದಿಸಲು ಸಂಪುಟ ಅನುಮೋದನೆ ನೀಡಿದೆ. ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಹೊಸ ವಾಸ್ಕ್ಯೂಲರ್ ಶಸ್ತ್ರಚಿಕಿತ್ಸಾ ವಿಭಾಗ ಸ್ಥಾಪನೆಯಾಗಲಿದ್ದು, ಈ ವಿಭಾಗಕ್ಕೆ ಅಗತ್ಯವಿರುವ ಉಪಕರಣಗಳನ್ನು ₹26.09 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.

ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ, ತಲಾ ₹1,500 ವೆಚ್ಚದಲ್ಲಿ ಔಷಧ ಕಿಟ್‌ಗಳನ್ನು ಇ-ಟೆಂಡರ್ ಮೂಲಕ ಖರೀದಿಸಲು ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ₹10.49 ಕೋಟಿ ರೂ.ಗಳನ್ನೂ ಉಪಯೋಗಿಸಲಾಗುವುದು.

ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಅರ್ಹತಾ ಪರೀಕ್ಷೆ 150 ಅಂಕ ಇರುವುದರಿಂದ, ನೇಮಕಾದ ನಂತರ ಈ ಅಧಿಕಾರಿಗಳಿಗೆ ಮತ್ತಷ್ಟು ಭಾಷಾ ಪರೀಕ್ಷೆ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ‘ಕರ್ನಾಟಕ ಸಿವಿಲ್ ಸೇವೆಗಳು, ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು ತಿದ್ದುಪಡಿ ನಿಯಮ – 2025’ ಗೆ ಸಂಪುಟದಿಂದ ಅನುಮೋದನೆ ದೊರೆತಿದೆ.

ವರದಿ : ಲಾವಣ್ಯ ಅನಿಗೋಳ

About The Author