ಗುಜರಾತ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಬಿಜೆಪಿಯ ಹೊಸ ಮಾಡೆಲ್, ಹೊಸಬರ ಸಂಪುಟ ಪುನಾರಚನೆಯಾಗಿದೆ. ಹರ್ಷ ಸಾಂಘ್ವಿ ಅವರನ್ನು ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಸಂಪುಟವನ್ನು 26 ಸದಸ್ಯರಿಗೆ ವಿಸ್ತರಿಸಲಾಗಿದೆ. ಇದರಲ್ಲಿ ಆರು ಹಿರಿಯರು ಉಳಿದು, 19 ಹೊಸವರು ಸೇರ್ಪಡೆಗೊಂಡಿದ್ದಾರೆ. 26 ಸದಸ್ಯರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಪ್ರಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಮತ್ತು ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಸೇರಿದಂತೆ ಹಲವು ಯುವ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಬಿಜೆಪಿಯ ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನೀತಿ ಅನ್ವಯ, ಪಕ್ಷದ ಹೊಸ ರಾಜ್ಯಾಧ್ಯಕ್ಷ ಜಗದೀಶ್ ವಿಶ್ವಕರ್ಮ ಸಂಪುಟದಿಂದ ಹೊರಗಿದ್ದಾರೆ. ಎಲ್ಲಾ 16 ಹಳೆಯ ಸಚಿವರು ರಾಜೀನಾಮೆ ನೀಡಿದ್ದು, ಇದು ಪೂರ್ಣ ಸಂಪುಟ ಪುನಾರಚನೆಗೆ ದಾರಿ ಮಾಡಿ ಕೊಟ್ಟಿದೆ.
ಈ ಹೊಸ ಬದಲಾವಣೆಗಳು 2027ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಶಕ್ತಿಯುತ ಅಡಿಪಾಯ ಹಾಕುವ ಉದ್ದೇಶ ಹೊಂದಿವೆ. ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ, ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದರು. ಈಗ ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಕೆಲವರಿಗೆ, ವಿಪಕ್ಷಗಳಿಂದ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರನ್ನ ಗುರುತಿಸಿ ಸಚಿವ ಸ್ಥಾನ ನೀಡಿರುವುದು ಹಿರಿಯ ನಾಯಕರ ಮೆಚ್ಚುಗೆಗೂ ಪಾತ್ರವಾಗಿದೆ.
ವರದಿ : ಲಾವಣ್ಯ ಅನಿಗೋಳ

