ಮಂಡ್ಯ: ರಾಜ್ಯದಲ್ಲಿ 14 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಸಂಭವಿಸಿದ್ದು, 15 ಜಿಲ್ಲೆಗಳು ತೀವ್ರ ಹಾನಿಗೆ ಒಳಗಾಗಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ನಿಗದಿಪಡಿಸಿದ ಮೊತ್ತಕ್ಕಿಂತಲೂ ₹8,500 ಕೋಟಿ ಹೆಚ್ಚುವರಿ ನೆರವು ಅಗತ್ಯವಿದೆ ಎಂದು ಹೇಳಿದ ಅವರು, ಕೇಂದ್ರ ಸಚಿವರು ಮತ್ತು ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ರಸಗೊಬ್ಬರ ಕೊರತೆಯಾದಾಗ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೆ, ಆದರೆ ಯಾವುದೇ ಸಹಾಯ ದೊರೆಯಲಿಲ್ಲ ಎಂದು ಚಲುವರಾಯಸ್ವಾಮಿ ಆರೋಪಿಸಿದರು. ಕೇಂದ್ರ ಮಂತ್ರಿಯಾಗಿ ಅವರ ಕೊಡುಗೆ ಏನು? ಅವರಿಂದ ರಾಜ್ಯಕ್ಕೆ ಒಂದೇ ಒಂದು ರೂಪಾಯಿಯ ಪ್ರಯೋಜನವೂ ಆಗಿಲ್ಲ ಎಂದು ಟೀಕಿಸಿದರು.
ಅವರು ಮುಂದುವರಿಸಿ, ಎಚ್.ಡಿ. ಕುಮಾರಸ್ವಾಮಿ ವರ್ಷಕ್ಕೆ ಕೆಲ ತಿಂಗಳು ಮಾತ್ರ ಸಂಸತ್ತಿಗೆ ಬರುತ್ತಾರೆ, ಮಾತನಾಡುವುದೇ ಇಲ್ಲ. ಸಂಸದರ ಸಾಮಾನ್ಯ ಅನುದಾನ ಎಲ್ಲರಿಗೂ ಲಭ್ಯವಾಗುತ್ತದೆ. ಅದನ್ನೇ ಸಾಧನೆ ಎಂದು ಬಿಂಬಿಸುವುದು ದೊಡ್ಡ ವಿಷಯವಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ತಂದುಕೊಟ್ಟಿದ್ದರೆ ಅದನ್ನು ಸಾಧನೆ ಎಂದು ಹೇಳಬಹುದಿತ್ತು ಎಂದು ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ