Thursday, October 23, 2025

Latest Posts

‘ಲಂಚದ ಡೈರಿ’ ಬಗ್ಗೆ ಪ್ರಸ್ತಾಪಿಸಿ ಟ್ವೀಟ್‌ನಲ್ಲೇ ಖರ್ಗೆಗೆ ಟಾಂಗ್ ಕೊಟ್ಟ ದಿ. ಅನಂತ್ ಕುಮಾರ್‌ ಪುತ್ರಿ!

- Advertisement -

ಬಿಹಾರ ಚುನಾವಣಾ ಫಂಡಿಂಗ್ ವಿವಾದ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ‘ಕಪ್ಪ ಕಾಣಿಕೆ’ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್–ಬಿಜೆಪಿ ನಡುವೆ ವಾಕ್‌ಯುದ್ಧ ತೀವ್ರಗೊಂಡಿದೆ. ಈ ವಿವಾದದ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಳೆಯ ವಿಡಿಯೋ ಒಂದು ಪೋಸ್ಟ್ ಮಾಡಿ ಬಿಜೆಪಿ ವಿರುದ್ಧ ಟಾಂಗ್ ಕೊಟ್ಟಿದ್ದು, ಅದಕ್ಕೆ ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿ ಐಶ್ವರ್ಯ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ.

‘ಕಪ್ಪ ನಿಮಗ್ಯಾಕೆ ಕೊಡಬೇಕು ಕಪ್ಪ’. ಹೀಗಂತ ಬ್ರಿಟಿಷರ ವಿರುದ್ದ ಸ್ವಾಭಿಮಾನದಿಂದ ತೊಡೆ ತಟ್ಟಿದ್ದು ಕಿತ್ತೂರು ಚೆನ್ನಮ್ಮ. ಆದರೆ ಇದೀಗ ಎಂಥ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಕಪ್ಪು ಕಾಣಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡುತ್ತಿದ್ದಾರೆ. ಕಪ್ಪ ಕಾಣಿಕೆ ವಿಷಯ ಮುನ್ನೆಲೆಗೆ ಬರಲು ಕಾರಣ ಬಿಹಾರ ವಿಧಾನಸಭಾ ಚುನಾವಣೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವರ ಔತಣಕೂಟ ರಾಜಕೀಯ ದಿಕ್ಕನ್ನು ಸೆಳೆದಿದೆ. ಈ ಸಮಾರಂಭದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಬಿಹಾರ ಚುನಾವಣೆಗೆ ಹಣ ನೀಡುತ್ತಿದೆ ಎಂಬ ಆರೋಪವನ್ನ ಬಿಜೆಪಿ ನಾಯಕರೊಬ್ಬರು ಮಾಡಿದ್ದಾರೆ. ಇದರ ಪ್ರತಿಕ್ರಿಯೆಯಾಗಿ ಪ್ರಿಯಾಂಕ್ ಖರ್ಗೆ, 2017ರ ಫೆಬ್ರವರಿ 13ರ ಯಡಿಯೂರಪ್ಪ ಮತ್ತು ದಿವಂಗತ ಅನಂತ್ ಕುಮಾರ್ ನಡುವಿನ ಒಂದು ಅಪರಿಚಿತ ಗೌಪ್ಯ ಸಂಭಾಷಣೆಯ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಿಜೆಪಿಯ ನೈತಿಕತೆ ಪ್ರಶ್ನಿಸಿದ್ದಾರೆ.

ನೀವು ಕೊಟ್ಟಿರ್ತೀರಿ, ನಾವು ಕೊಟ್ಟಿರ್ತೀರಿ ಅದನ್ನ ಯಾರಾದ್ರೂ ಬರೆದುಕೊಳ್ತಾರಾ ಅಂತ ಗುಸುಗುಸುಮಾತನಾಡಿಕೊಂಡಿದ್ರು. ಪ್ರಿಯಾಂಕ್ ಖರ್ಗೆ ವಿಡಿಯೋ ಜೊತೆ, ಕೇಳಿಸಿಕೊಳ್ಳಿ ಬಿಜೆಪಿಯವರೇ ಹೈಕಮಾಂಡ್‌ಗೆ ನೀವು ಕಪ್ಪ ನೀಡಿದ್ದನ್ನ ಮರೆತುಬಿಟ್ರಾ? ಅಂತ ಪ್ರಶ್ನಿಸಿದ್ದಾರೆ.

ಈ ವಿಡಿಯೋ ಪ್ರಚಾರಕ್ಕೆ ಐಶ್ವರ್ಯ ಅನಂತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಟಾಂಗ್ ಕೊಟ್ಟಿದ್ದಾರೆ. RSS ವಿರುದ್ಧ ವಿಫಲ ಯತ್ನದ ಬಳಿಕ, ನಿಮ್ಮ ಪಕ್ಷದವರೇ ಮೆಚ್ಚುತ್ತಿದ್ದ ಅನಂತಕುಮಾರ್ ಅವರ ಹಿಂದೆ ಬೀಳಲು ನಿರ್ಧರಿಸಿದ್ದೀರಿ. ಈಗ ನನ್ನ ತಂದೆಯ ವಿರುದ್ಧ ನಿಂದನೆ ಮಾಡುತ್ತಿರುವುದು ನಿಮ್ಮ ದುರ್ಭಾಗ್ಯ.
ನೀವು ಮರೆತಿದ್ದರೆ ನೆನಪಿಸಿಕೊಳ್ಳಿ – ನಿಮ್ಮ ಪಕ್ಷದ ನಾಯಕರ ಹೆಸರು ಇರುವ ‘ಲಂಚದ ಡೈರಿ’ ಇಂದಿಗೂ ಜನರಿಗೆ ನೆನಪಿದೆ. ಸತ್ಯ ಯಾವತ್ತೂ ಬಹಿರಂಗವಾಗುವ ಗುಣ ಹೊಂದಿದೆ ಎಂಬುದು ನೆನಪಿರಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಚುನಾವಣೆ ರಾಜಕೀಯದ ಬದಲಾಯಿಸಿರುವ ನೈತಿಕ ಮೌಲ್ಯಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭಿಸಿವೆ. ‘ನೋಟು ಇಲ್ಲದಿದ್ದರೆ ಓಟು ಇಲ್ಲ’ ಅನ್ನೋದು ಈಗ ಸಲೀಸಾಗಿ ನಡೆಯುತ್ತಿದೆ. ಒಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ತೊಡೆಯ ತಟ್ಟಿ ಬಂಡಾಯ ಮಾಡಿದ ಕಿತ್ತೂರು ಚೆನ್ನಮ್ಮನಂತಹ ನಾಯಕತ್ವ ಈಗ ಕಪ್ಪ ಕಾಣಿಕೆಗೆ ಇಳಿದಿರುವ ಸ್ಥಿತಿಯು ಜನತೆಯಲ್ಲಿಯೇ ಅಸಹನೆ ಹುಟ್ಟಿಸುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss