ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ ಡಿಜೆ ಹಾಕಿಕೊಂಡು ಎಣ್ಣೆ ಹಚ್ಚಿ ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡುತ್ತಾರೆ. ಇದು ಯಾವ ಸಂಸ್ಕೃತಿ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ದೇಶಭಕ್ತಿ ಎಂದರೆ ಧ್ವಜ, ರಾಷ್ಟ್ರಗೀತೆ, ಸಂವಿಧಾನಕ್ಕೆ ಗೌರವ, ಆದರೆ ಆರ್‌ಎಸ್‌ಎಸ್ ಯಾವತ್ತೂ ಅದಕ್ಕೆ ತಲೆಬಾಗಿಲ್ಲ ಎಂದಿದ್ದಾರೆ.
ಆರ್‌ಎಸ್‌ಎಸ್‌ನವರು ದೊಣ್ಣೆ ಹಿಡಿದು ಪಥಸಂಚಲನ ಏಕೆ ಮಾಡಬೇಕು? ನೋಂದಣಿಯಾಗದ ಸಂಸ್ಥೆ ಆಗಿರುವ ಆರ್‌ಎಸ್‌ಎಸ್‌ನಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಯಾರು ಹೊಣೆ? ಎಂದು ಕಿಡಿಕಾರಿದ್ದಾರೆ. ಪ್ರತಿ ಬಾರಿ ಬ್ಯಾನ್ ಆದರೂ ಕ್ಷಮೆ ಕೋರಿ ಹೊರಬರುತ್ತಾರೆ ಎಂದು ಟೀಕಿಸಿದ್ದಾರೆ.
ಹರಿಪ್ರಸಾದ್ ಅವರು ಆರ್‌ಎಸ್‌ಎಸ್‌ನ ಹಣಕಾಸು ಮೂಲಗಳ ಮೇಲೂ ಪ್ರಶ್ನೆ ಎತ್ತಿ, ಗುರುದಕ್ಷಿಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತಿದ್ದಾರೆ, ಕಪ್ಪು ಹಣ ಇಲ್ಲೇ ಇದೆ. ನೂರು ಕೋಟಿ ರೂಪಾಯಿ ಮೌಲ್ಯದ ಕಚೇರಿ ನಿರ್ಮಿಸಿದ್ದಾರೆ, ಅದಕ್ಕೆ ಹಣ ಎಲ್ಲಿಂದ ಬಂದಿದೆ? ಎಂದು ಪ್ರಶ್ನಿಸಿದ್ದಾರೆ. ಸೇವಾದಳ ತಪ್ಪು ಮಾಡಿದರೆ ಕಾಂಗ್ರೆಸ್ ಹೊಣೆ, ಹಾಗಾದರೆ ಆರ್‌ಎಸ್‌ಎಸ್ ತಪ್ಪಿಗೆ ಯಾರು ಹೊಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ