ಹಠ ಬಿಟ್ಟಿಲ್ಲದ ಟ್ರಬಲ್ ಶೂಟರ್ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಟೆಂಪಲ್ ರನ್ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆ ಹಾಸನಾಂಬ ದೇವಿ ದರ್ಶನ ಮಾಡಿದ ಡಿಕೆಶಿ, ಇದೀಗ ಪತ್ನಿ ಉಷಾ ಮತ್ತು ಕುಟುಂಬದವರ ಜೊತೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಮೂಲ ಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನರ ಸುಖ–ಶಾಂತಿಗಾಗಿ ಪ್ರಾರ್ಥಿಸಿದ್ದೇನೆಂದು ಟ್ವೀಟ್ ಮಾಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ದರ್ಶನದ ಬಳಿಕ ಡಿಕೆಶಿ ಮಾಧ್ಯಮಗಳ ಜೊತೆ ಮಾತನಾಡಿ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ವೇಳೆ ಮಠಕ್ಕೆ ಬಂದಿದ್ದೆವು. ಆ ಸಮಯದ ಸಂಕಲ್ಪದಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗುರು–ದೇವರ ಅನುಗ್ರಹ ಅತ್ಯವಶ್ಯಕ ಎಂದು ಹೇಳಿದ್ದಾರೆ. ಇದೇ ವೇಳೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಅವರು, ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.
ಮಂತ್ರಾಲಯದ ಬಳಿಕ ಡಿಕೆಶಿ ಪಂಚಮುಖಿ ಆಂಜನೇಯನ ದೇಗುಲಕ್ಕೂ ತೆರಳಿ ಮನೋವಾಂಚಲ್ಯ ಸಿದ್ಧಿ ಅರ್ಚನೆ ನಡೆಸಿದ್ದಾರೆ. ಕುಟುಂಬ ಸದಸ್ಯರ ಹೆಸರಲ್ಲಿ ವಿಶೇಷ ಪೂಜೆ ಮಾಡಿ, ಸಂಕಲ್ಪ ಸಲ್ಲಿಸಿರುವ ಡಿಕೆಶಿ, ಇಷ್ಟಸಿದ್ಧಿಗಾಗಿ ದೇವರ ಕೃಪೆ ಬೇಕು ಎಂದಿದ್ದಾರೆ. ಸಿಎಂ ಬದಲಾವಣೆ ಮತ್ತು ನವೆಂಬರ್ ಕ್ರಾಂತಿ ಚರ್ಚೆಯ ನಡುವೆ ನಡೆಯುತ್ತಿರುವ ಈ ಟೆಂಪಲ್ ರನ್, ಡಿಕೆಶಿ ಮುಂದಿನ ಹೆಜ್ಜೆಯ ಸಂಕೇತವೋ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಗೋಜಿ ಸೃಷ್ಟಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ