ಸಿಎಂ ಸಿದ್ದರಾಮಯ್ಯ ಅವರು ತೇಜಸ್ವಿ ಸೂರ್ಯ ನನಗೆ ಅಮಾವಾಸ್ಯೆಯಂತೆ ಕಾಣ್ತಾರೆ ಎಂದು ಹೇಳಿದ ಹೇಳಿಕೆಗೆ, ಯುವ ಸಂಸದ ತೇಜಸ್ವಿ ಸೂರ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪದೇಪದೇ ವೈಯಕ್ತಿಕ ಟೀಕೆ ಮಾಡುವುದು ಅವರಿಗೆ ಶೋಭೆ ತರದು ಎಂದು ಹೇಳಿದ ತೇಜಸ್ವಿ, ಅವರು ಹಿರಿಯರು, ಆದರೆ ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಯೂ ವ್ಯತ್ಯಾಸ ಗೊತ್ತಿಲ್ಲ ಅನಿಸುತ್ತೆ ಎಂದು ವ್ಯಂಗ್ಯ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಮುಂದುವರಿಸಿ, ಅಮಾವಾಸ್ಯೆ ಅಥವಾ ಹುಣ್ಣಿಮೆಯಲ್ಲೂ ಸೂರ್ಯ ಯಾವಾಗಲೂ ಇರುತ್ತಾನೆ. ಅಮಾವಾಸ್ಯೆ ದಿನ ಸೂರ್ಯ ಇಲ್ಲ ಅಂದುಕೊಳ್ಳಬೇಡಿ. ಸೂರ್ಯನೂ, ಚಂದ್ರನೂ ತಮ್ಮದೇ ಸ್ಥಾನ ಹೊಂದಿದ್ದಾರೆ. ಸಿಎಂ ಅವರು ಮಾತನಾಡುವ ಮುನ್ನ ವ್ಯತ್ಯಾಸ ಅರಿತು ಮಾತನಾಡಲಿ ಎಂದು ಪಾಠ ಹೇಳಿದ್ದಾರೆ.
ಸಿಎಂ ವಿರುದ್ಧ ವೈಯಕ್ತಿಕವಾಗಿ ಮಾತನಾಡಬಹುದಾದರೂ, ನಾನು ಒಬ್ಬ ಜವಾಬ್ದಾರಿಯುಳ್ಳ ಸ್ಥಾನದಲ್ಲಿದ್ದೇನೆ. ಸಿದ್ದರಾಮಯ್ಯ ನನ್ನ ತಂದೆಯವರಂತೆ ಹಿರಿಯರು. ಅವರಂತೆ ವೈಯಕ್ತಿಕವಾಗಿ ಮಾತನಾಡುವುದು ನನ್ನ ಸಂಸ್ಕಾರವಲ್ಲ ಎಂದು ತೇಜಸ್ವಿ ಸೂರ್ಯ ಗೌರವಪೂರ್ವಕವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕಕ್ಕೆ ದೊಡ್ಡ ಗ್ರಹಣ ಹಿಡಿದಿದ್ರೆ ಅದು ನಿಮ್ಮ ಆಡಳಿತ. ಇನ್ನೂ ಎರಡು ವರೆ ವರ್ಷಗಳಲ್ಲಿ ಆ ಗ್ರಹಣ ಕಳೆದು ಹೋಗಿ, ಸೂರ್ಯ-ಚಂದ್ರರಂತೆ ಹೊಳೆಯುವ ಸರ್ಕಾರ ಬರಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಜೊತೆಗೆ, ಸಿಎಂ ಅಮಾವಾಸ್ಯೆ-ಹುಣ್ಣಿಮೆಯ ವಿಚಾರ ಜ್ಯೋತಿಷಿಗಳಿಗೆ ಬಿಡಲಿ. ಪ್ರಿಯಾಂಕ್ ಖರ್ಗೆ RSS ನಿಷೇಧದ ಮಾತು ಬಿಟ್ಟು ಉದ್ಯೋಗ ಸೃಷ್ಟಿಯ ಕಡೆ ಗಮನಕೊಡಲಿ, ಪರಮೇಶ್ವರ್ ಬೆಟ್ಟಿಂಗ್ ಬಿಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿ ಎಂದು ಸಂಸದ ತೇಜಸ್ವಿ ಸೂರ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ